ಮಡಿಕೇರಿ, ಮಾ. 29: ಸೂರ್ಲಬ್ಬಿ ನಾಡಿನ ಕಿಕ್ಕರಳ್ಳಿ, ಮಂಕ್ಯ, ಕುಂಬಾರಗಡಿಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ದೊರಕದಿರುವದು, ಒಂದು ದಶಕದಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ಸಿಬ್ಬಂದಿ ನೇಮಿಸದೆ ವಂಚಿಸಿರುವದು, ಮೊಬೈಲ್ ಟವರ್ ಇತ್ಯಾದಿ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಖಂಡಿಸಿ ಪ್ರಸಕ್ತ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಅಲ್ಲಿನ ನಿವಾಸಿಗಳು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕವಿದ್ದರೂ ಮಳೆಗಾಲದ ಸಂಪೂರ್ಣ ಅವಧಿಗೆ ಕಾರ್ಗತ್ತಲೆ ಎದುರಾಗುತ್ತಿದ್ದು, ಸರಕಾರದಿಂದ ರೇಡಿಯೋ, ಟಿ.ವಿ.ಗಳಲ್ಲಿ ನಿರಂತರ ಆರೋಗ್ಯದ ಬಗ್ಗೆ ಜಾಹೀರಾತು ಪ್ರಕಟಿಸುವದು ಕಂಡು ಬಂದರೂ, ಸ್ಥಳೀಯರಿಗೆ ಯಾವದೇ ಸೌಲಭ್ಯ ಲಭಿಸುತ್ತಿಲ್ಲವೆಂದು ನಾಡು ಅಧ್ಯಕ್ಷ ಎಂ.ಎಸ್. ತಿಮ್ಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸಭೆ ಸೇರಿದ ಸೂರ್ಲಬ್ಬಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮ ವಾಸಿಗಳು, ಒಂದು ವಾರದಿಂದ ಬಾಗಿಲು ಮುಚ್ಚಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಬಗ್ಗೆ ಇಲಾಖೆಯ ಯಾರೊಬ್ಬರೂ ತಿರುಗಿ ನೋಡಿಲ್ಲವೆಂದು ಆಕ್ರೋಶ ಹೊರಗೆಡವಿದರು. ಈ ಬಗ್ಗೆ ಜಿ.ಪಂ. ಉಪಾಧ್ಯಕ್ಷೆ, ತಾ.ಪಂ. ಪ್ರತಿನಿಧಿಗಳು, ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ಖುದ್ದು ವಿಷಯ ತಿಳಿಸಿಯೂ ಏನೂ ಪ್ರಯೋಜನವಾಗಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಏ. 3ರಂದು ಮತ್ತೆ ಸೂರ್ಲಬ್ಬಿ ನಾಡಿನ ಪ್ರಮುಖರು ಸಭೆ ಸೇರಿ ಸಮಸ್ಯೆಗಳ ಹಿನ್ನೆಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿರುವದಾಗಿ ಹೇಳಿಕೆ ನೀಡಿದ್ದಾರೆ.