ಕುಶಾಲನಗರ, ಮಾ. 28: ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆ. ನದಿಯಿಂದ ಅನಧಿಕೃತವಾಗಿ ಪಂಪ್ ಮೂಲಕ ನೀರೆತ್ತುವ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶದ ಬೆನ್ನಲ್ಲೇ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ.

ಕಳೆದ ಮೂರು ವಾರಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕುಡಿವ ನೀರಿನ ಅಭಾವ ತಲೆದೋರಿತ್ತು. ಇದೀಗ ಮಂಗಳವಾರ ರಾತ್ರಿಯಿಂದ ನದಿಯಲ್ಲಿ ನೀರಿನ ಹರಿವು ಕಂಡ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಪಟ್ಟಣಕ್ಕೆ ನೀರು ಒದಗಿಸಲು ಕ್ರಮಕೈಗೊಂಡಿದ್ದಾರೆ.

ನದಿಯಲ್ಲಿ ಅಂದಾಜು 2 ರಿಂದ 3 ಅಡಿಗಳಷ್ಟು ನೀರು ಹರಿಯುತ್ತಿದ್ದು, ಕುಶಾಲನಗರ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಬಂಡ್ ನಿರ್ಮಿಸಿ ಕುಡಿಯುವ ನೀರು ಒದಗಿಸಲು ಕ್ರಮಕೈಗೊಂಡಿದ್ದಾರೆ. ಮುಂದಿನ ಒಂದು ತಿಂಗಳ ಅವಧಿಗೆ ಕುಡಿಯುವ ನೀರು ಪೂರೈಕೆಗೆ ಯಾವದೇ ರೀತಿಯ ಸಮಸ್ಯೆ ತಲೆದೋರುವ ಸಾಧ್ಯತೆ ಇಲ್ಲ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ. ನದಿ ಪಾತ್ರದಲ್ಲಿ ಮಳೆ ಸುರಿಯದಿದ್ದರೂ ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶ ಪಾಲನೆ ಯಾಗುವದರೊಂದಿಗೆ ನದಿಯಲ್ಲಿ ನೀರು ಹರಿದ ಬಗ್ಗೆ ನದಿ ತಟದ ಜನತೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.