ಮಡಿಕೇರಿ, ಮಾ. 28: ಪೆರಾಜೆ ಶ್ರೀಶಾಸ್ತಾವು ದೇವಳದ ಕಾಲಾವಧಿ ಜಾತ್ರೋತ್ಸವ ತಾ.25ರಿಂದ ಆರಂಭಗೊಂಡಿದ್ದು, ಎ.10ರ ತನಕ ನಡೆಯಲಿದೆ. ಇದರ ಅಂಗವಾಗಿ ಉಗ್ರಾಣ ತುಂಬಿಸುವದರೊಂದಿಗೆ ಆರಂಭವಾಗಿ ತಾ. 26 ಮತ್ತು 27ರಂದು ದೇವರ ಭೂತಬಲಿ, ದೇವರ ಬಲಿ, ಬಟ್ಟಲು ಕಾಣಿಕೆ ನಡೆಯಿತು.

ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಒಂದು ತಿಂಗಳುಗಳ ಕಾಲ ನಡೆಯುವ ಜಾತ್ರೆಗೆ ತಾ. 9ರಂದು ಜಾತ್ರೋತ್ಸವದ ಗೊನೆಮೂಹೂರ್ತ ನಡೆದು, ತಾ. 25ರಂದು ಉಗ್ರಾಣ ತುಂಬಿಸುವದು, ತಾ. 26ರಂದು ಬೆಳಿಗ್ಗೆ ಕಲಶೋತ್ಸವ, ಮಹಾಪೂಜೆ, ಮಹಾಸಮಾರಾಧನೆ, ಸಾಯಂಕಾಲ ಶ್ರೀಉಳ್ಳಾಕುಲ ಮಾಡದ ಅರಮನೆಯಿಂದ ಭಂಡಾರ ತರುವುದು, ಮುಖತೋರಣ ಏರಿಸುವದು, ಶಿಸ್ತುಅಳೆಯುವದು, ದೇವರ ನೃತ್ಯಬಲಿ, ರಾತ್ರಿ ಶ್ರೀದೇವರ ಭೂತಬಲಿ ನಡೆಯಿತು.

ತಾ. 27ರಂದು ಬೆಳಿಗ್ಗೆ ದೇವರ ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ತುಳುಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು 2 ನಡೆಯಿತು. ತಾ. 28ರಂದು ಮಧ್ಯಹ್ನದಿಂದ ಬೇಟೆ ಕರಿಮಗನ್ ಈಶ್ವರನ್ ದೈವ, ಬೇಟೆಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ತುಳು ಕೋಲ 2ರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಿತು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ದೇವತಕ್ಕ ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಕಾರ್ಯದರ್ಶಿ ಅಶೋಕ ಪೀಚೆ ಹಾಗೂ ದೇವಳದ ಮಾಜಿ ಮೊಕ್ತೇಸರರು, ಕಾರ್ಯದರ್ಶಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು.