ಸೋಮವಾರಪೇಟೆ, ಮಾ.28: ವೀರಶೈವ ಸಮಾಜದ ಅಕ್ಕನ ಬಳಗದಿಂದ ತಾ. 31 ಮತ್ತು ಏ.1 ರಂದು ಅಕ್ಕಮಹಾದೇವಿ ಜಯಂತಿ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷೆ ಜಲಜಾ ಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಂಗವಾಗಿ ತಾ. 31ರಂದು ಅಕ್ಕಮಹಾದೇವಿ ಮಂಟಪದಲ್ಲಿ ಬೆಳಿಗ್ಗೆ 7 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಪೂರ್ವಾಹ್ನ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ನಂತರ ಅಕ್ಕನ ಬಳಗ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಲಿದೆ ಎಂದರು.

ಏ.1ರಂದು ಬೆಳಿಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿರಕ್ತ ಮಠಾಧೀಶರಾದ ಶ್ರೀವಿಶ್ವೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಉಪನ್ಯಾಸಕಿ ಎಸ್.ಜಿ. ನಯನತಾರಾ ಮುಖ್ಯ ಭಾಷಣ ಮಾಡಲಿದ್ದಾರೆ. ವೀರಶೈವ ಸಮಾಜದ ಯಜಮಾನರಾದ ಕೆ.ಎನ್. ಶಿವಕುಮಾರ್, ಸಮಾಜದ ಶೆಟ್ರು ಕೆ.ಎನ್. ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎ.ಜಿ. ಚಂದ್ರಶೇಖರ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಸ್ತು ಪ್ರದರ್ಶನ ಮಳಿಗೆಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಟಾಲ್ ಹೊಂದುವ ಸದಸ್ಯರುಗಳು ಮೊ;8971871367ನ್ನು ಸಂಪರ್ಕಿಸಬಹುದು ಎಂದು ಜಲಜಾ ಶೇಖರ್ ತಿಳಿಸಿದರು.

ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ಕಾರ್ಯದರ್ಶಿ ಲತಾ ಮಂಜುನಾಥ್, ಸಹ ಕಾರ್ಯದರ್ಶಿ ಜಲಜಾ ವಿಜಯಕುಮಾರ್, ಖಜಾಂಚಿ ಸುಮಾ ಸುದೀಪ್, ನಿರ್ದೇಶಕಿ ಉಷಾ ತೇಜಸ್ವಿ ಅವರುಗಳು ಉಪಸ್ಥಿತರಿದ್ದರು.