ಸುಂಟಿಕೊಪ್ಪ, ಮಾ.28: ಚೆಟ್ಟಳ್ಳಿ ಸಮೀಪದ ಕಂಡಕೆರೆಯ ಕಾಫಿ ಬೋರ್ಡ್‍ನ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ 4 ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಕಾನೆ ಸಹಾಯದಿಂದ ಒಂದು ಹೆಣ್ಣಾನೆಗೆ ರೇಡಿಯೋ ಕಾಲರ್ ಅಳವಡಿಸುವಲ್ಲಿ ಸಫಲರಾಗಿದ್ದಾರೆ.

ಚೆಟ್ಟಳ್ಳಿ ವಿಭಾಗದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ ಎಂದು ಕಾಫಿ ಬೆಳೆಗಾರರು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಮಡಿಕೇರಿ ಎಸಿಎಫ್ ಚಿಣ್ಣಪ್ಪ, ಉಪ ಸಂರಕ್ಷಣಾಧಿಕಾರಿ ರಂಜನ್ ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಈ ವಿಭಾಗದಲ್ಲಿ ಸಿಬ್ಬಂದಿಗಳೊಂದಿಗೆ ಬೆಳಗ್ಗಿನಿಂದಲೇ ಕಾರ್ಯಾಚರಣೆ ನಡೆಸಿದಾಗ 4 ಕಾಡಾನೆಗಳು ಚೆಟ್ಟಳ್ಳಿ ಕಾಫಿ ಬೋರ್ಡ್‍ನ ತೋಟದ ಕೆರೆಯ ಬಳಿ ಪತ್ತೆಯಾದವು ಅನಂತರ ಸಾಕಾನೆ ಭೀಮ, ಅಭಿಮನ್ಯುರನ್ನು ಮಾವುತರಾದ ವಸಂತ ರಾಧಾಕೃಷ್ಣ ಸ್ಥಳಕ್ಕೆ ಕರೆತಂದು ಡಾ. ಮುಜೀಬ್ ಹಾಗೂ ಅರಣ್ಯ ಇಲಾಖೆ ವೀಕ್ಷಕರು ಕಾವಾಡಿಗಳ ಸಮ್ಮುಖದಲ್ಲಿ 4 ಕಾಡಾನೆಗಳಲ್ಲಿ 1 ಹೆಣ್ಣಾನೆಗೆ ಅರಿವಳಿಕೆ ಮದ್ದನ್ನು ಪ್ರಯೋಗಿಸಿ ರೇಡಿಯೋ ಕಾಲರ್ ಅಳವಡಿಸುವಲ್ಲಿ ಸಫಲರಾಗಿದ್ದಾರೆ.

ಈ ವಲಯದಲ್ಲಿ ಕಾರ್ಮಿಕರು ಕಾಡಾನೆ ಹಾವಳಿಯಿಂದ ತೋಟಕ್ಕೆ ಕೆಲಸಕ್ಕೆ ಬರಲು ಇತ್ತೀಚಿನ ದಿನಗಳಲ್ಲಿ ಹಿಂದೇಟು ಹಾಕುತ್ತಿದ್ದರು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.