ಸಿದ್ದಾಪುರ, ಮಾ. 28: ತನ್ನ ಪತ್ನಿಯನ್ನೇ ಪತಿ ಭೀಕರವಾಗಿ ಹತ್ಯಗೈದಿರುವ ಘಟನೆ ಸಿದ್ದಾಪುರ ಸಮೀಪ ಹುಂಡಿಯಲ್ಲಿ ನಡೆದಿದೆ. ಬಾಡಗ ಬಾಣಂಗಾಲ ಗ್ರಾಮ ಹುಂಡಿಯ ಕಾಲೋನಿಯ ನಿವಾಸಿ ಜೇನುಕುರುಬರ ರಾಜು (45) ಎಂಬಾತ ತನ್ನ ಪತ್ನಿ ಪದ್ಮಾ (40) ಎಂಬಾಕೆಯೊಂದಿಗೆ ಮಂಗಳವಾರ ರಾತ್ರಿ ಕಲಹ ನಡೆಸಿ ಬಳಿಕ ಕತ್ತಿಯಿಂದ ಪದ್ಮಾಳ ಮುಖಕ್ಕೆ ತಲೆಗೆ ಬೀಕರವಾಗಿ ಕಡಿದು ಹತ್ಯೆಗೈದಿದ್ದಾನೆ. ಕೊಲೆ ಆರೋಪಿ ರಾಜುವನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ರಾಜುವಿನ ಕಿರುಕುಳವನ್ನು ತಾಳಲಾರದೇ ಪತ್ನಿ ಪದ್ಮಾ ಕಳೆದ 9 ವರ್ಷಗಳ ಹಿಂದೆ ರಾಜುವನ್ನು ತೊರೆದು ತನ್ನ ಪುತ್ರಿಯೊಂದಿಗೆ ಸುಂಟಿಕೊಪ್ಪದ ನಾಕೂರುವಿನಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ರಾಜು ತನ್ನ ಪತ್ನಿಯನ್ನು ಹುಂಡಿಗೆ ಕರೆ ತಂದು ಆಗ್ಗಿಂದಾಗೆ ಕಲಹ ನಡೆಸುತ್ತಿದ್ದನು ಎನ್ನಲಾಗಿದ್ದು, ಮಂಗಳವಾರದಂದು ಪತ್ನಿಯೊಂದಿಗೆ ಕಲಹ ನಡೆಸಿದ ರಾಜು ಕತ್ತಿಯಿಂದ ಪತ್ನಿಯನ್ನು ಮನೆಯೊಳಗೆ ಕಡಿದು ಕೊಲೆ ಮಾಡಿದ್ದಾನೆ. ಈತ ಕೊಲೆ ಮಾಡಲೆಂದೇ ಕಳೆದ ಕೆಲವು ತಿಂಗಳ ಹಿಂದೆ ಉಪಾಯ ಮಾಡಿ ಪತ್ನಿಯನ್ನು ಹುಂಡಿಗೆ ಕರೆ ತಂದಿದ್ದ ಎಂಬ ಮಾತು ಕೇಳಿ ಬರುತಿತ್ತು. ಕೊಲೆ ಆರೋಪಿ ರಾಜು ಈ ಹಿಂದೆ ಬೇರೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದ ಎಂದು ತಿಳಿದುಬಂದಿದೆ. ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. - ವಾಸು