ವೀರಾಜಪೇಟೆ, ಮಾ. 27: ಕೊಡಗಿನ ಕಾವೇರಿ ನದಿ ಕರ್ನಾಟಕ ಹಾಗೂ ಇತರ ರಾಜ್ಯಗಳಿಗೂ ನೀರನ್ನು ಪೂರೈಸುತ್ತಿದ್ದು, ಪ್ರತಿಯೊಬ್ಬರೂ ನದಿಯನ್ನು ಸಂರಕ್ಷಿಸಲು ಶ್ರಮಿಸಬೇಕಾಗಿದೆ ಎಂದು ಇಲ್ಲಿನ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ದೇವಣಗೇರಿ ಪ್ಲಾಂಟರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ದೇವಣಗೇರಿ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ “ವಿಶ್ವ ಜಲ ಸಂರಕ್ಷಣಾ ದಿನಾಚರಣೆ’’ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ನ್ಯಾಯಾಧೀಶ ಬಿ.ಕೆ. ಮನು ಅವರು, ಕೃಷಿಕರು ನೀರನ್ನು ಸಂಸ್ಕರಣೆ ಮಾಡಿ ಬೆಳೆಯನ್ನು ಬೆಳೆಯುವಂತಾಗಬೇಕು. ಪ್ರತಿಯೊಬ್ಬರೂ ಅಂತರ್ ಜಲವನ್ನು ಹೆಚ್ಚಿಸಲು ಸಹಕರಿಸಬೇಕಾಗಿದೆ ಜೊತೆಗೆ ಮಳೆಯ ನೀರನ್ನು ಸಂರಕ್ಷಿಸಬೇಕಾಗಿದೆ. ನೀರಿನ ಮಟ್ಟ ಹೆಚ್ಚಿಸುವಂತಾಗಬೇಕು ಗಿಡಗಳನ್ನು ನೆಡುವದು ಅರಣ್ಯವನ್ನು ರಕ್ಷಣೆ ಮಾಡುವದು ಎಲ್ಲರ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಜಲವನ್ನು ಸಂರಕ್ಷಣೆ ಮಾಡುವದರೊಂದಿಗೆ ಅಂತರ್ ಜಲ ಮಟ್ಟ ಹೆಚ್ಚಿಸಬೇಕು. ಪ್ರತಿ ಮನೆಗಳಲ್ಲಿಯೂ ಇಂಗು ಗುಂಡಿ ಮಾಡಬೇಕು. ಜಿಲ್ಲೆಯಲ್ಲಿ ಪಾಳು ಬಿಟ್ಟಿರುವ ಎಲ್ಲ ಗದ್ದೆಗಳಲ್ಲಿ ಭತ್ತ ಬೆಳೆಯುವಂತಾಗಬೇಕು. ಇದರಿಂದ ಅಂತರ ಜಲ ಮಟ್ಟ ಹೆಚ್ಚಿಸಬಹುದು ಎಂದರು. ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮಾತನಾಡಿದರು.

ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಎಂ. ಲೋಕೇಶ್ ಕಾರ್ಯ ಕ್ರಮದ ಅದ್ಯಕ್ಷತೆ ವಹಿಸಿ ಮಾತ ನಾಡಿದರು. ವಕೀಲ ಮಹಮ್ಮದ್ ರಫೀಕ್ ಜಲ ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ವಿ.ಎಸ್.ಎಸ್.ಎನ್.ನ ಕಾರ್ಯ ನಿರ್ವಹಣಾಧಿಕಾರಿ ನಳಿನಿ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ವಿ.ಜಿ. ರಾಕೇಶ್ ಸ್ವಾಗತಿಸಿ, ನಿರೂಪಿಸಿದರು.