ಮಡಿಕೇರಿ, ಮಾ. 27: ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ಶೈಕ್ಷಣಿಕ ಚಟುವಟಿಕೆಗಳ ವಿವರಗಳು ಇಂತಿವೆ.ಶಾಲೆಗೆ ಕೊಡುಗೆ
ನಾಪೋಕ್ಲು: ಸಮೀಪದ ಚೆರಿಯಪರಂಬು ಸರಕಾರಿ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕಿ ಪಿ.ಕೆ. ಪಾರ್ವತಿ ಮತ್ತು ಕರಿಕೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕುಸುಮಾ ಕುಮಾರಿ ನಗಾರಿ, ತಾಳ ಮತ್ತು ತುತ್ತೂರಿಗಳನ್ನು ಕೊಡುಗೆಯಾಗಿ ನೀಡಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಡಿಕೇರಿ: ತಾ. 27 ರಿಂದ 31 ರವರೆಗೆ ಜಮ್ಮು-ಕಾಶ್ಮೀರದ ಎಂ.ಎ. ಸ್ಟೇಡಿಯಂನಲ್ಲಿ 17ನೇ ಸಬ್ ಜೂನಿಯರ್ ಬಾಲಕ ಹಾಗೂ ಬಾಲಕಿಯರ ರಾಷ್ಟ್ರಮಟ್ಟದ ವುಶು ಸ್ಪರ್ಧೆಗೆ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 2ನೇ ತರಗತಿ ವಿದ್ಯಾರ್ಥಿ ಪಿ.ಎನ್. ಜೀವ ಆಯ್ಕೆಯಾಗಿದ್ದಾನೆ. ಈತ ಪಿ. ನವೀನ್ ನಾಣಯ್ಯ ಮತ್ತು ಪ್ರಿಯಾ ಪದ್ಮಾವತಿ ದಂಪತಿಯ ಪುತ್ರ. ಬಿ.ಎ. ಆನಂದ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ.
ನೀರಿನ ಸಂರಕ್ಷಣೆಗೆ ಕರೆ
ಸುಂಟಿಕೊಪ್ಪ: ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಕೆ ಮಾಡುವ ಮೂಲಕ ಭವಿಷ್ಯತ್ತಿನ ದೃಷ್ಟಿಯಿಂದ ನೀರನ್ನು ಸಂರಕ್ಷಿಸಬೇಕಿದೆ. ಯಾವ ಸಂದರ್ಭದಲ್ಲೂ ನೀರನ್ನು ಪೋಲು ಮಾಡದೆ ಜಲ ಸಂರಕ್ಷಿಸಬೇಕು ಎಂದು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಹೇಳಿದರು.
ಸುಂಟಿಕೊಪ್ಪದಲ್ಲಿ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್, ಜೆ.ಸಿ.ಐ. ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಶಾಲಾ ಘಟಕ ಹಾಗೂ ಸುಂಟಿಕೊಪ್ಪ ಕರ್ನಾಟಕ ಬ್ಯಾಂಕ್ ವತಿಯಿಂದ ಶನಿವಾರ ‘ನಿಸರ್ಗಕ್ಕಾಗಿ ನೀರು’ ಎಂಬ ಶೀರ್ಷಿಕೆಯಡಿ ‘ವಿಶ್ವ ಜಲದಿನ’ದ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಜನ ಜಾಗೃತಿ ಅಭಿಯಾನದಲ್ಲಿ ವಿಶ್ವ ಜಲದಿನದ ಮಹತ್ವ ಮತ್ತು ನೀರಿನ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ನಾಡಿನ ಜೀವನದಿ ಕಾವೇರಿ ತವರಿನಲ್ಲೇ ನೀರಿನ ಕೊರತೆ ಉಂಟಾಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿರುವ ಬಗ್ಗೆ ಜಾಗೃತರಾಗದಿದ್ದಲ್ಲಿ ಭವಿಷ್ಯತ್ತಿನಲ್ಲಿ ತೀವ್ರ ತೊಂದರೆ ಉಂಟಾಗಲಿದೆ ಎಂದರು.
ವಿಶ್ವ ಜಲದಿನದ ಮಹತ್ವ ಕುರಿತು ಮಾಹಿತಿ ನೀಡಿದ ಶಾಲೆಯ ಇಕೋ ಕ್ಲಬ್‍ನ ಸಂಚಾಲಕರೂ ಆದ ‘ಪರಿಸರ ಮಿತ್ರ’ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ನೀರು ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯ ನಾವು ಹನಿ ಹನಿ ನೀರನ್ನು ಉಳಿಸುವ ಮೂಲಕ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
‘ನೀರಿನ ಸಂರಕ್ಷಣೆ’ ಕುರಿತ ಮಾಹಿತಿ ಮತ್ತು ಘೋಷಣೆಗಳನ್ನೊಳಗೊಂಡ ಕರಪತ್ರ ಬಿಡುಗಡೆಗೊಳಿಸಿದ ಸುಂಟಿಕೊಪ್ಪ ಕರ್ನಾಟಕ ಬ್ಯಾಂಕ್‍ನ ಮೆನೇಜರ್ ಜಿ.ಚೇತನ್, ನೀರಿನ ಸಂರಕ್ಷಣೆಗೆ ನಾವು ಬದ್ಧತೆ ಪುನರ್ ಸ್ಥಾಪಿಸುವ ಮೂಲಕ ಜಲ ಸಂರಕ್ಷಣಾ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಬೇಕು ಎಂದರು.
‘ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಭಿತ್ತಿಪತ್ರ ಬಿಡುಗಡೆಗೊಳಿಸಿದ ಜೆ.ಸಿ.ಐ. ಸಂಸ್ಥೆ ಅಧ್ಯಕ್ಷ ಹೆಚ್.ಆರ್. ಅರುಣ್ ಕುಮಾರ್, ಎಲ್ಲರೂ ಒಗ್ಗೂಡಿ ಜಲ ಸಂರಕ್ಷಣೆಗಾಗಿ ಪಣ ತೊಡೋಣ ಎಂದರು.
ಜಿಲ್ಲಾ ಪ್ರಬಾರ ದೈಹಿಕ ಶಿಕ್ಷಣ ಅಧೀಕ್ಷಕ ಎಸ್.ಟಿ. ವೆಂಕಟೇಶ್, ಹಿರಿಯ ಶಿಕ್ಷಕಿ ಎಂ.ಎನ್. ಲತಾ, ಜೇಸೀ ಸುರೇಶ್ ಕುಶಾಲಪ್ಪ, ಶಿಕ್ಷಕಿ ಮಂಜುಳಾ ಎಂ. ಕೆರೂರ್ ಇದ್ದರು. ನಂತರ ನಡೆದ ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗಿದರು.
ಶಿಕ್ಷಣದೊಂದಿಗೆ ಕೌಶಲ್ಯ ರೂಢಿಸಿಕೊಳ್ಳಲು ಕರೆ
ಸೋಮವಾರಪೇಟೆ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕೌಶಲ್ಯವನ್ನೂ ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ತಾ. 26 ರಂದು ನಡೆದ ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾಭ್ಯಾಸದ ನಂತರ ಸ್ವ ಉದ್ಯೋಗದತ್ತಲೂ ಗಮನಹರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು. ದೇಶದ ಸಮರ್ಥ ನಾಯಕರಾಗಿ ಬೆಳೆಯಲು ಎಲ್ಲರಿಗೂ ವಿದ್ಯೆಯ ಅಗತ್ಯವಿದೆ ಎಂದರು.
ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕರಿಯಪ್ಪ ರೈ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎನ್. ರಮೇಶ್, ಸದಸ್ಯರಾದ ಜಯಪ್ಪ ಹಾನಗಲ್ಲು, ದಳವಾಯಿ ರಾಜು, ಯೋಗೇಶ್, ಕುಶಾಲಪ್ಪ, ಪ್ರಾಂಶುಪಾಲ ಪ್ರೊ. ಕೆ.ಈ. ಐಪು, ಪ್ರಾಧ್ಯಾಪಕರುಗಳಾದ ಶ್ರೀಧರ್, ಕಮಲಾಕ್ಷ ಬಲ್ಯಾಯ, ಹೆಚ್.ಎನ್. ರಾಜು, ಬಿ.ಎಂ. ಪ್ರವೀಣ್ ಕುಮಾರ್, ಕೆ.ಹೆಚ್. ಧನಲಕ್ಷ್ಮಿ, ವಿದ್ಯಾರ್ಥಿ ಪರಿಷತ್ ನಿರ್ದೇಶಕ ಎಂ.ಎಸ್. ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.