ಮಡಿಕೇರಿ, ಮಾ. 27 : ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮೇ 12 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, 2018ರ ರಾಜ್ಯ ವಿಧಾನಸಭೆ ಚುನಾವಣೆಯ ಅಧಿಸೂಚನೆಯನ್ನು ಪ್ರಕಟಿಸಿದರು. ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ.ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದ್ದು, ಏಪ್ರಿಲ್ 25 ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮ ಪತ್ರ ವಾಪಸ್ ಪಡೆಯಲು ಏಪ್ರಿಲ್ 27 ಕೊನೆ ದಿನಾಂಕವಾಗಿದೆ. ಒಟ್ಟು ಈ ಬಾರಿ ರಾಜ್ಯದಲ್ಲಿ 4 ಕೋಟಿ 96 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ.
ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬರಲಿದ್ದು, ಓರ್ವ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗ ರೂ. 28 ಲಕ್ಷಕ್ಕೆ ಮಿತಿಗೊಳಿಸಿದೆ. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನಷ್ಟು ಹೈಟೆಕ್ ಆಗಿದ್ದು, ಒಟ್ಟು 56,659 ಮತಗಟ್ಟೆಗಳಲ್ಲಿ ನಡೆಯಲಿರುವ ಮತದಾನದ ವೇಳೆ ಇವಿಎಂ ಜೊತೆಗೆ ವಿವಿ ಪ್ಯಾಟ್‍ಗಳನ್ನು ಬಳಸಿ ಕೊಳ್ಳಲಾಗುತ್ತಿದೆ. ಮತ ಎಣಿಕೆಯ ಸಂದರ್ಭ ಪ್ರತಿಕ್ಷಣ ಫಲಿತಾಂಶ ವೀಕ್ಷಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ವೆಬ್ ಕ್ಯಾಸ್ಟಿಂಗ್ ಸಿಸ್ಟಮ್ ಅಳವಡಿಸಿ ಕೊಂಡಿದೆ. ಇದರ ಜೊತೆಗೆ ಮತದಾರ ಯಾವ ಪಕ್ಷಕ್ಕೆ ಮತ ಹಾಕಿದ್ದಾನೋ ಅದರ ಚೀಟಿ ಕೂಡ ಎಣಿಕೆಗೆ ಲಭ್ಯವಿರಲಿದೆ. ಯಾವದಾದರೂ ಒಂದು ಮತಗಟ್ಟೆಯ ಮತ ಚೀಟಿಗಳನ್ನು ಎಣಿಕೆ ಮಾಡಲು ಅವಕಾಶವಿರಲಿದೆ. ಅದರಲ್ಲಿ ಯಾವದೇ ವ್ಯತ್ಯಾಸ ಕಂಡು ಬಾರದಿದ್ದಲ್ಲಿ ವಿವಾದಕ್ಕೆ ಅವಕಾಶ ವಿರುವದಿಲ್ಲ. ಚುನಾವಣೆಯಲ್ಲಿ ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿ ಬಳಸಲು ಚುನಾವಣಾ ಆಯೋಗ ನಿರ್ದೇಶಿಸಿದೆ.
ಪ್ಲಾಸ್ಟಿಕ್ ಮುಂತಾದ ಪರಿಸರಕ್ಕೆ ಹಾನಿ ಉಂಟು ಮಾಡುವ ಸಾಮಗ್ರಿಗಳನ್ನು ಬಳಸುವಂತಿಲ್ಲ. ಇನ್ನು ಧ್ವನಿವರ್ಧಕ ಬಳಕೆಗೂ ಕಾಲಾವಧಿ ನಿಗದಿ ಮಾಡಲಾಗಿದೆ. ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಮಾತ್ರ ಲೌಡ್ ಸ್ಪೀಕರ್ ಬಳಸಿ ಪ್ರಚಾರ ಮಾಡಬಹುದಾಗಿದೆ. ಶಾಲೆ ಮುಂತಾದ ಸೂಕ್ಷ್ಮ ಪ್ರದೇಶಗಳ ಬಳಿ ಧ್ವನಿವರ್ಧಕ ಬಳಸುವಂತಿಲ್ಲ. ಚುನಾವಣೆ ನಡೆದ ಬಳಿಕ ಪ್ರತಿ ಅಭ್ಯರ್ಥಿಯೂ ತಮ್ಮ ಚುನಾವಣಾ ವೆಚ್ಚವನ್ನು ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.
ರಾಜ್ಯ ಚುನಾವಣಾ ಆಯೋಗ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಚುನಾವಣೆ
(ಮೊದಲ ಪುಟದಿಂದ) ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನ್ಯಾಯಸಮ್ಮತ ಹಾಗೂ ನಿರ್ಭೀತಿಯಿಂದ ಜನರು ತಮ್ಮ ಹಕ್ಕು ಚಲಾಯಿಸುವ ಬಗ್ಗೆ ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಿನ ಅಧಿಕಾರಿಗಳ ನೆರವಿನಿಂದ ಜಾಗೃತಿ ಮೂಡಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಚುನಾವಣಾ ಮುಖ್ಯ ದಿನಾಂಕಗಳು
ಮಾರ್ಚ್ 27 - ನೀತಿ ಸಂಹಿತೆ ಜಾರಿ ಏಪ್ರಿಲ್ 17 - ಚುನಾವಣಾ ಅಧಿಸೂಚನೆ ಪ್ರಕಟ ಏಪ್ರಿಲ್ 24 - ನಾಮಪತ್ರ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 25 - ನಾಮಪತ್ರಗಳ ಪರಿಶೀಲನೆ ಏಪ್ರಿಲ್ 27 - ನಾಮಪತ್ರ ಹಿಂಪಡೆಯಲು ಕೊನೆಯ ದಿನ ಮೇ 12 - ಮತದಾನ ಮೇ 15 - ಮತ ಎಣಿಕೆ. ರಾಜಕೀಯ ಪಕ್ಷಗಳ ಖರ್ಚಿಗೆ ಯಾವದೇ ಮಿತಿ ವಿಧಿಸಿಲ್ಲ. ಈ ಬಾರಿ 51 ಲಕ್ಷ ಹೊಸ ಮತದಾರರು ಸೇರಿದ್ದಾರೆ. ಸಂಪೂರ್ಣ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳು 450.
ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿವೆ. ಒಟ್ಟು 4 ಕೋಟಿ 96 ಲಕ್ಷ ಮತದಾರರ ಪೈಕಿ 2 ಕೋಟಿ 51 ಲಕ್ಷ ಪುರುಷ ಮತದಾರದ್ದರೆ, 2 ಕೋಟಿ 44 ಲಕ್ಷ ಮಹಿಳಾ ಮತದಾರರಿದ್ದಾರೆ. ಕನ್ನಡ, ಇಂಗ್ಲಿಷ್‍ನಲ್ಲಿ ಮತದಾರರ ಚೀಟಿ ಇರುತ್ತದೆ ಎಂದು ರಾವತ್ ತಿಳಿಸಿದರು.