ಮಡಿಕೇರಿ, ಮಾ. 27: ಕೊಡಗಿನ ಕುಲಮಾತೆ ಹಾಗೂ ಜೀವನದಿ ಕಾವೇರಿಯ ಉಳಿವಿಗಾಗಿ ಜಿಲ್ಲೆಯಲ್ಲಿ 2.50 ಲಕ್ಷ ವಿವಿಧ ಜಾತಿಯ ಗಿಡಗಳನ್ನು ನೆಡುವದರೊಂದಿಗೆ, ಕಾಡು ಬೆಳೆಸುವ ಮುಖಾಂತರ ಅಂತರ್ಜಲ ಮಟ್ಟ ಹೆಚ್ಚಿಸಲಾಗುವದು ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥರಾದ ಶ್ರೀ ರವಿಶಂಕರ್ ಗುರೂಜಿ ಘೋಷಿಸಿದ್ದಾರೆ. ಜಿಲ್ಲೆಯ ಕಾವೇರಿ ನದಿಯೊಂದಿಗೆ ಲಕ್ಷ್ಮಣ ತೀರ್ಥ ಸಹಿತ ದಕ್ಷಿಣ ಭಾರತದ ನದಿಗಳ ಉಳಿವಿಗಾಗಿ ಆಂದೋಲನ ನಡೆಸಲಾಗುವದು ಎಂದು ಅವರು ಪ್ರಕಟಿಸಿದರು.ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ನದಿಗಳ ಪುನಶ್ಚೇತನ ಸಲುವಾಗಿ ವಿಶೇಷ ಪ್ರಾರ್ಥನೆ ಬಳಿಕ ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸಿದ ಅವರು, ಕಾವೇರಿಯ ಪಾವಿತ್ರ್ಯ ಮತ್ತು ಬತ್ತಿ ಹೋಗದಂತೆ ಸಂರಕ್ಷಿಸುವದು ಎಲ್ಲರ ಕರ್ತವ್ಯವೆಂದು ನೆನಪಿಸಿದರು.ವಸತಿ ಯೋಜನೆ ಬೇಡ: ಕೊಡಗಿನ ಪರಿಸರವನ್ನು ನಾಶಗೊಳಿಸಿ ಎಲ್ಲೂ ವಸತಿ ಯೋಜನೆ ರೂಪಿಸಲು (ಲೇಔಟ್) ಅವಕಾಶ ನೀಡದಂತೆ ಜನತೆಗೆ ಕರೆ ನೀಡಿದ ಅವರು, ಪ್ರವಾಸೋದ್ಯಮ ಅವಶ್ಯಕವಾದರೂ, ಶಿಸ್ತುಬದ್ಧವಿರ ಲೆಂದು ಕಿವಿಮಾತು ಹೇಳುತ್ತಾ, ಪ್ಲಾಸ್ಟಿಕ್ ಇತ್ಯಾದಿ ಬಳಕೆ ಸಂಪೂರ್ಣ ನಿಷೇಧಿಸಬೇಕೆಂದು ಸಂಬಂಧ ಪಟ್ಟವರನ್ನು ಒತ್ತಾಯಿಸಿದರು.

ಸರಕಾರದ ನೆರವು ಅಗತ್ಯ: ನದಿಗಳ ಪುನಶ್ಚೇತನಕ್ಕೆ ಸರಕಾರಗಳು ನೆರವು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಬೆಂಗಳೂರಿ ನಂತಹ ಕಾರ್ಪೋರೇಟ್ ಸಂಸ್ಥೆಗಳು ಕಾವೇರಿ ನದಿಪಾತ್ರ ರಕ್ಷಣೆಗೆ ನೆರವು ಒದಗಿಸಬೇಕೆಂದು ಪ್ರತಿಪಾದಿಸಿದರು. ಕೊಡಗಿನ ಜನತೆ ತಮ್ಮ ತೋಟಗಳಲ್ಲಿ ಈಗ ಬೆಳೆಸಿರುವ ಮರಗಳೊಂದಿಗೆ ಶೇ. 25 ರಷ್ಟು ಅಧಿಕಗೊಳಿಸುವಂತೆ ಕರೆ ನೀಡುತ್ತಾ,

(ಮೊದಲ ಪುಟದಿಂದ) ಆ ಮುಖಾಂತರ ಕಾವೇರಿ ರಕ್ಷಣೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆಯಿತ್ತರು.

ಅರಣ್ಯ ಇಲಾಖೆಗೆ ಕಿವಿಮಾತು: ಕೊಡಗಿನಲ್ಲಿ ಅರಣ್ಯ ಇಲಾಖೆ ಇಲ್ಲಿನ ಪ್ರಕೃತಿಯನ್ನು ಕಾಪಾಡುವತ್ತ ಕಾಳಜಿಯೊಂದಿಗೆ ಅತ್ತಿ, ಹಲಸು, ಆಲ, ಮಾವು ಇತ್ಯಾದಿ ಮರಗಳನ್ನು ನೆಟ್ಟು ಬೆಳೆಸುವಂತೆ ಕಿವಿಮಾತು ಹೇಳಿದ ಅವರು, ನೀಲಗಿರಿ, ಅಕೇಶಿಯಾದಂತಹ ಮರ ನೆಡದಂತೆ ತಿಳಿ ಹೇಳಿದರು. ಜಿಲ್ಲೆಯ ನದಿ ಪಾತ್ರದಲ್ಲಿ ಸ್ಥಳೀಯ ಸಂಸ್ಥೆಗಳು ಚರಂಡಿ ನೀರು ಇತ್ಯಾದಿ ಹರಿಯದಂತೆ ನಿಗಾವಿಡುವಂತೆಯೂ ತಿಳಿಸಿದರು.

ಸಂಸದ ಕರೆ: ಕೊಡಗಿನ ಜನತೆ ಈ ನೆಲ, ಜಲ, ಸಂಸ್ಕøತಿ ರಕ್ಷಣೆಯೊಂದಿಗೆ ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಗೊಳಿಸದಂತೆ ಸಂಸದ ಪ್ರತಾಪ್ ಸಿಂಹ ಕರೆ ನೀಡಿದರು. ಬೆಂಗಳೂರನ್ನು ಹಾಳುಗೆಡವಿದ ಮಂದಿ ಜಿಲ್ಲೆಯಲ್ಲಿ ಯೂ ಪರಿಸರ ಹಾಳುಗೆಡವುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿಯ ಉಳಿವಿಗಾಗಿ ರವಿಶಂಕರ್ ಗುರೂಜಿ ರೂಪಿಸಿರುವ ಆಂದೋಲ ನಕ್ಕೆ ತಮ್ಮ ಪೂರ್ಣ ಬೆಂಬಲವನ್ನು ಸಂಸದರು ಘೋಷಿಸಿದರು.

ಕಾವೇರಿ ಉಳಿಸಿಕೊಳ್ಳುತ್ತೇವೆ: ಕಾವೇರಿ ನದಿಯೊಂದಿಗೆ ಕೊಡಗಿನ ಜನತೆಗೆ ಅವಿನಾಭಾವ ಸಂಬಂಧ ವಿದ್ದು, ಎಂತಹ ಪರಿಸ್ಥಿತಿಯಲ್ಲಿಯೂ ಜೀವನದಿ ಭತ್ತದಂತೆ ಉಳಿಸಿಕೊಳ್ಳ ಲಾಗುವದು ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಶಯ ವ್ಯಕ್ತಪಡಿಸಿದರು. ಕಾವೇರಿ ಬಗ್ಗೆ ಪೂಜ್ಯತೆ, ದೇವರ ಕಾಡು ರಕ್ಷಣೆಯೊಂದಿಗೆ ಪ್ರಕೃತಿ ಉಳಿವು ತೋಟಗಳಲ್ಲಿ ಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಜನತೆ ಕೊಡುಗೆ ನೀಡುತ್ತಲೇ ಬಂದಿದ್ದಾಗಿ ಅವರು ನೆನಪಿಸಿದರು. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಂದೋಲ ನಕ್ಕೆ ಬೆಂಬಲದ ಭರವಸೆ ನೀಡಿದರು.

ನದಿ ಆಂದೋಲನ ಸಂಯೋಜಕ ಡಾ. ಲಿಂಗರಾಜ್ ಕೂಡ ಮಾತನಾಡಿದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸೇರಿದಂತೆ ಕ್ಷೇತ್ರದ ಜಿ.ಪಂ., ತಾ.ಪಂ., ಗ್ರಾ.ಪಂ. ಪ್ರತಿನಿಧಿಗಳು, ಆರ್ಟ್ ಆಫ್ ಲಿವಿಂಗ್ ಬಳಗದವರು, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಇತರರು ಪಾಲ್ಗೊಂಡಿದ್ದರು.

ಚಿತ್ರ: ಕೆ.ಡಿ. ಸುನಿಲ್