ಮಡಿಕೇರಿ, ಮಾ. 27: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದ್ದು, ಕೇಂದ್ರ ಚುನಾವಣಾ ಆಯೋಗದ ನೀತಿ ಸಂಹಿತೆ ಯಾರೇ ಉಲ್ಲಂಘಿಸಿದರೂ ಕ್ರಮವಹಿಸಲಾಗುವದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಐ. ಶ್ರೀವಿದ್ಯಾ ಸುಳಿವು ನೀಡಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ಜಿಲ್ಲಾಡಳಿತದಿಂದ ಈಗಾಗಲೇ ನೀತಿ ಸಂಹಿತೆ ಪಾಲನೆಗಾಗಿ ವಿವಿಧ ಹಂತದಲ್ಲಿ ಗ್ರಾ.ಪಂ. ಹಾಗೂ ಮತಗಟ್ಟೆ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮತ ಯಂತ್ರಗಳ ತಪಾಸಣೆಯೂ ಪೂರ್ಣಗೊಂಡು ರಾಜಕೀಯ ಪ್ರತಿನಿಧಿಗಳಿಗೂ ತಿಳುವಳಿಕೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರ ಮೇಲ್ವಿಚಾರಣೆಯಲ್ಲಿ (ಮೊದಲ ಪುಟದಿಂದ) ಕೆಳ ಹಂತದವರೆಗೆ ತಂಡಗಳನ್ನು ರಚಿಸಿದ್ದು, ಶೋಷಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನರ ಸಹಿತ ನಿರ್ಭಯದಿಂದ

ಚುನಾವಣೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಲಾಗುವದು ಎಂದರು.

ಜಿಲ್ಲೆಯ ಮಾಕುಟ್ಟ, ಕರಿಕೆ, ಕುಟ್ಟ ಚೆಕ್‍ಪೋಸ್ಟ್‍ಗಳ ಸಹಿತ ನೆರೆಯ ಜಿಲ್ಲೆಗಳ ಚೆಕ್‍ಪೋಸ್ಟ್‍ಗಳಲ್ಲಿ ಕೂಡ ಚುನಾವಣೆಗೆ ಭಂಗ ಉಂಟಾಗದಂತೆ ನಿಗಾವಹಿಸಲಾಗುವದು ಎಂದು ತಿಳಿಸಿದ ಅವರು, ಅಲ್ಲಲ್ಲಿ ಪೊಲೀಸ್ ಗೃಹ ರಕ್ಷಕ, ಎನ್‍ಸಿಸಿ ಸಿಬ್ಬಂದಿ ನಿಯೋಜಿಸಲಾಗುವದು ಎಂದರು.

ಜಾಹೀರಾತು ತೆರವು: ಜಿಲ್ಲೆಯ ಎಲ್ಲೆಡೆ ಗ್ರಾ.ಪಂ. ಹಂತದಲ್ಲಿ ಕೂಡ ಸರಕಾರಿ ಅಥವಾ ಖಾಸಗಿ ಒಡೆತನದ ಸ್ಥಳಗಳಲ್ಲಿ ಭಿತ್ತರಿಸಿರುವ ಎಲ್ಲ ಜಾಹೀರಾತುಗಳನ್ನು ತಕ್ಷಣದಿಂದ ತೆರವುಗೊಳಿಸಿ, ಮುಂದಿನ 72 ಗಂಟೆಯೊಳಗೆ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವದು ಎಂದು ಶ್ರೀವಿದ್ಯಾ ವಿವರಿಸಿದರು.

ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಗೊಂಡಿದ್ದು, ಯಾರದಾದರೂ ಹೆಸರು ಸೇರ್ಪಡೆಗೊಳಿಸಲು ಕೂಡ ಅವಕಾಶವಿರುವದಾಗಿ ತಿಳಿಸಿದ ಅವರು, ಈ ಬಗ್ಗೆ ಆಯ ಮತಗಟ್ಟೆ ವ್ಯಾಪ್ತಿಯಲ್ಲಿ ಅಥವಾ ಗ್ರಾ.ಪಂ., ತಾ.ಪಂ., ಕಂದಾಯ ಕಚೇರಿಗಳಲ್ಲಿ ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ಮಾಡಿದರು. ಚುನಾವಣಾ ವೆಬ್‍ಸೈಟ್ ಮೂಲಕವೂ ಮಾಹಿತಿ ದೊರಕಲಿದೆ ಎಂದರು.

ಮುಂದಿನ ದಿನಗಳಲ್ಲಿ ಮತದಾನದ ಪ್ರಾತ್ಯಕ್ಷಿಕೆಯನ್ನು ಮಾಧ್ಯಮ ಸಹಿತ ಸಾರ್ವಜನಿಕ ತಿಳುವಳಿಕೆ ನೀಡಲಾಗುವದು ಎಂದ ಚುನಾವಣಾಧಿಕಾರಿ, ಈಗಾಗಲೇ ಜಿಲ್ಲಾಡಳಿತ ಪೂರ್ವ ತಯಾರಿ ಮಾಡಿಕೊಂಡಿರುವದಾಗಿ ವಿವರಿಸಿದರು.

12 ನಕ್ಸಲ್ ಮತಗಟ್ಟೆ: ಜಿಲ್ಲೆಯಲ್ಲಿ ನಕ್ಸಲರ ಚಲನವಲನ ಸಂಬಂಧವಿರುವ 12 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಒಟ್ಟು 538 ಮತಗಟ್ಟೆಗಳು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇವೆ ಎಂದರು. ಈ ಸಾಲಿನಲ್ಲಿ 8 ಅಧಿಕ ಮತಗಟ್ಟೆಗಳು, 164 ಸೂಕ್ಷ್ಮ ಮತಗಟ್ಟೆ, 88 ಅತಿ ಸೂಕ್ಷ್ಮವೆಂದು ಪ್ರಸಕ್ತ ಗಮನಿಸಲಾಗಿದ್ದು, ಮುಂದೆ ಕೆಲವೊಂದು ಮಾರ್ಪಾಡು ಆಗಬಹುದು ಎಂದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಭದ್ರತಾ ಕ್ರಮಗಳನ್ನು ವಿವರಿಸಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಹಾಜರಿದ್ದರು. ಮತಯಂತ್ರಗಳ ಬಳಕೆ ಬಗ್ಗೆಯೂ ಮಾಹಿತಿ ನೀಡಿದರು.