ಭಾಗಮಂಡಲ, ಮಾ. 27: ಚೆಟ್ಟಿಮಾನಿಯಲ್ಲಿ ಗೌಡ ಕುಟುಂಬಗಳ ನಡುವೆ ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕ್ರಿಕೆಟ್ ಉತ್ಸವದ ಉದ್ಘಾಟನೆ ಇಂದು ನೆರವೇರಿತು. ಈ ವರ್ಷ ಬೆಳ್ಳಿಹಬ್ಬದ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಹಾಗೂ ಉದ್ಯಮಿ ಕುಮಾರಸ್ವಾಮಿ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕೆದಂಬಾಡಿ ಮನೆತನವು ಉತ್ತಮ ಚರಿತ್ರೆಯನ್ನು ಹೊಂದಿದ್ದು, ಸದ್ಯದಲ್ಲಿಯೇ ಕೆದಂಬಾಡಿ ಐನ್‍ಮನೆಗೆ ಸಂಬಂಧಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಗುವದು. ಕೆದಂಬಾಡಿ ಕ್ರಿಕೆಟ್ ಉತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಉತ್ಸವದ ಯಶಸ್ಸಿಗೆ ಶುಭಕೋರಿದರು. ಶಿಕ್ಷಕಿ ಕುದುಪಜೆ ಕವಿತಕಿಶೋರ್ ಮಾತನಾಡಿ, ಹಲವು ವರ್ಷಗಳಿಂದ ಕೆದಂಬಾಡಿ ಕ್ರಿಕೆಟ್ ಉತ್ಸವವನ್ನು ಯಾವದೇ ಎಡರು ತೊಡರುಗಳಿಲ್ಲದೆ ನಡೆಸಿಕೊಂಡು ಬರುತ್ತಿರುವದು (ಮೊದಲ ಪುಟದಿಂದ) ಹಾಗೂ ಬದ್ಧತೆಯಿಂದ ಆಚರಿಸುತ್ತಿರುವದು ಸ್ವಾಗತಾರ್ಹ.
ಜನಾಂಗದ ಏಳಿಗೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಲಿ. ಮಹಿಳೆಯರಿಗೂ ಕೂಡ ಮುಂದಿನ ದಿನಗಳಲ್ಲಿ ಕ್ರೀಡೆಗಳನ್ನು ಆಯೋಜಿಸುವಂತಾಗಲಿ ಎಂದರು. ತಾಲೂಕು ಪಂಚಾಯಿತಿ ಸದಸ್ಯ ಗಪ್ಪುಗಣಪತಿ ಮಾತನಾಡಿ, ಕ್ರೀಡೆಯನ್ನು ನಡೆಸುವದು ಎಷ್ಟು ಮುಖ್ಯವೋ ಸಮಯ ಪಾಲನೆಯೂ ಅಷ್ಟೇ ಮುಖ್ಯ.
ಕ್ರೀಡಾಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಅಮ್ಮವನ ವಿಜು ಬ್ಯಾಟ್ ಮಾಡುವದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್ ವಹಿಸಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ದಬ್ಬಡ್ಕ ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್, ಉಪಾಧ್ಯಕ್ಷೆ ವೀಣಾ, ಸದಸ್ಯ ಹ್ಯಾರೀಸ್, ನಿವೃತ್ತ ಇಂಜಿನಿಯರ್ ಕೆದಂಬಾಡಿ ರಾಜು, ಸಂಚಾಲಕ ಕೆದಂಬಾಡಿ ಸುರೇಶ್, ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕಿ ಕಲಾವತಿ, ಇನ್ನಿತರರು ಉಪಸ್ಥಿತರಿದ್ದರು.