ವೀರಾಜಪೇಟೆ, ಮಾ.27: ವೀರಾಜಪೇಟೆಗೆ ಸಮೀಪದ ಕೆ.ಬೋಯಿಕೇರಿಯ ಮಹದೇವ ಎಂಬವರ ಪತ್ನಿ ಗೌರಮ್ಮ (50) ಎಂಬಾಕೆ ಅದೇ ಗ್ರಾಮದ 21 ಮಂದಿಯನ್ನು ಚೀಟಿಗೆ ಸೇರಿಸಿ ಹಣ ಕೊಡದೆ ವಂಚಿಸಿ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆಕೆಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ಇಂದು ಇಲ್ಲಿನ ಸಮುಚ್ಚಯ ನ್ಯಾಯಾಲಯದ ಪ್ರಿನ್ಸಿಪÀಲ್ ಮುನ್ಸಿಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ.ಕಳೆದ 2008ರಲ್ಲಿ ಕೊಳ್ಳೆಗಾಲ ದಿಂದ ಕೂಲಿ ಕೆಲಸದ ನಿಮಿತ್ತ ಗೌರಮ್ಮ ವೀರಾಜಪೇಟೆ ಬಳಿಯ ಕೆ. ಬೋಯಿಕೇರಿಯಲ್ಲಿ ಬಾಡಿಗೆ ಮನೆ ಪಡೆದು ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಈಕೆಯೊಂದಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸಂಗಾತಿಗಳನ್ನು ಚೀಟಿಗೆ ಸೇರಿಸಿದಲ್ಲದೆ ಇತರ ಆಪ್ತ ಕಾರ್ಮಿಕರಿಗೂ ಚೀಟಿಯಿಂದ ನಿವೇಶನ ಖರೀದಿಸುವ ಆಸೆ ತೋರಿಸಿದ್ದಾಳೆ. ನಂತರ ಗ್ರಾಹಕರಿಗೆ ಬಂದ ಚೀಟಿಯನ್ನು ಅವರಿಗೆ ಪಾವತಿಸದೆ ಮತ್ತೆ ಬಡ್ಡಿಯ ಆಸೆ ತೋರಿಸಿ ಚೀಟಿಗೆ ತೊಡಗಿಸಿ ಕೊಂಡಿದ್ದಾಳೆ. ನಿವೇಶನವನ್ನು ಪಟ್ಟಣದ ಸಮೀಪದಲ್ಲಿ ಕೊಡುವದಾಗಿ ಚೀಟಿ ಗ್ರಾಹಕರಾದ ಮಹಿಳೆಯರು, ಪುರುಷರಿಗೆ ನಂಬಿಸಿದ್ದಾಳೆ. ಚೀಟಿ ಮುಕ್ತಾಯಗೊಂಡು ಹೊಸ ಚೀಟಿ ಆರಂಭಿಸಿದರೂ ಹಿಂದಿನ ಚೀಟಿಯ ನಗದು ಹಣ, ನಿವೇಶನ ಕೊಡುವಲ್ಲಿ ಗೌರಮ್ಮ

(ಮೊದಲ ಪುಟದಿಂದ) ವಿಫಲಗೊಂಡಾಗ ಚೀಟಿ ಗ್ರಾಹಕರಲ್ಲಿ ಸಂಶಯ ಮೂಡಿದೆ. ಕೆಲವು ಗ್ರಾಹಕರಿಗೆ ನಿವೇಶನ ಖರೀದಿಗೆ ಹಣ ಕಡಿಮೆ ಇರುವದಾಗಿ ನಂಬಿಸಿ ಅವರಿಂದ ಒಟ್ಟು 135 ಗ್ರಾಂಗಳ ಚಿನ್ನಾಭರಣವನ್ನು ಪಡೆದು ಇಲ್ಲಿನ ಮುತ್ತೂಟ್ ಸಂಸ್ಥೆಯಲ್ಲಿ ರೂ 2,65,000ಕ್ಕೆ ಅಡವಿಟ್ಟಿದ್ದಾಳೆ.

ಸಂಶಯಗೊಂಡ ಗ್ರಾಹಕರು ಒಮ್ಮತವಾಗಿ ಮನೆಗೆ ತೆರಳಿ ವಿಚಾರಿಸಿದಾಗ ಸಲ್ಲದ ಸಬೂಬು ಹೇಳಿದ್ದರಿಂದ ಅದೇ ಗ್ರಾಮದ ನಾರಾಯಣ ಎಂಬವರ ಪತ್ನಿ ಎಂ. ಶಾಂತಿ ವಂಚನೆಗೊಳಗಾದ 20 ಮಂದಿ ಪರವಾಗಿ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ತಾ. 22.09.2016 ಲಿಖಿತ ದೂರು ನೀಡಿದ್ದಾರೆ. ಇದನ್ನರಿತ ಗೌರಮ್ಮ ಮಾರನೇ ದಿನವೇ ಮನೆ ಖಾಲಿ ಮಾಡಿ ಕುಟುಂಬ ಸಮೇತ ಮೈಸೂರು ಕಡೆಗೆ ತೆರಳಿದ್ದಾಳೆ. ಪೊಲೀಸರು ಐ.ಪಿ.ಸಿ. 406 ಹಾಗೂ 420ರ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಯ ಶೋಧನೆಯಲ್ಲಿ ತೊಡಗಿದ್ದರು.

ಎರಡು ದಿನಗಳ ಹಿಂದೆ ಕೆ. ಬೋಯಿಕೇರಿಯ ಆರ್. ಸ್ವಾಮಿ ನಾಯಕ ಎಂಬಾತ ಕೆಲಸದ ನಿಮಿತ್ತ ಮೈಸೂರಿನ ರೈಲ್ವೇ ಸ್ಟೇಶನ್ ಬಳಿ ಹೋದಾಗ ಗೌರಮ್ಮ ಒಂದು ಬದಿಯಲ್ಲಿ ಹೂ ಮಾರಾಟ

ಮಾಡುತ್ತಿದ್ದುದನ್ನು ನೋಡಿ ನಿನ್ನೆ ದಿನ ಪೊಲೀಸರಿಗೆ ಸುಳಿವು ನೀಡಿದ ಮೇರೆ ಪೊಲೀಸರು ಆಕೆಯನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ತನಿಖೆಯಲ್ಲಿ ತಿಳಿಸಿದಂತೆ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ಅವರು ಇಲ್ಲಿನ ಮುತ್ತೂಟ್ ಸಂಸ್ಥೆಯಲ್ಲಿ 8 ಪ್ರತ್ಯೇಕ ಖಾತೆಗಳಲ್ಲಿ ಅಡವಿರಿಸಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ತರಕಾರಿ ವ್ಯಾಪಾರಿ ಅಯ್ಯಪ್ಪ ಎಂಬವನಲ್ಲಿ ರೂ. 23 ಲಕ್ಷ ಹಣ ಕೊಟ್ಟಿರುವದಾಗಿ ಗೌರಮ್ಮ ಪೊಲೀಸರಿಗೆ ತಿಳಿಸಿದ್ದು, ಈತ ಯಾರೆಂಬದು ಇನ್ನೂ ಪೊಲೀಸರಿಗೆ ಗೊತ್ತಾಗಿಲ್ಲ ಎಂದು ಹೇಳಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ ಗೌರಮ್ಮ ಗ್ರಾಹಕರಿಗೆ ಒಟ್ಟು ರೂ. 42,91,000 ವಂಚಿಸಿರುವದಾಗಿ ಗೊತ್ತಾಗಿದೆ. ನಿವೇಶನಕ್ಕಾಗಿ ಚೀಟಿ ಗ್ರಾಹಕರಿಂದ ಒಟ್ಟು 138 ಗ್ರಾಂ ಚಿನ್ನಾಭರಣ ಪಡೆದಿದ್ದು, ಇದರ ಪೈಕಿ 37 ಗ್ರಾಂ ಚಿನ್ನಾಭರಣ ಇನ್ನೂ ನಾಪತ್ತೆಯಾಗಿಲ್ಲ. ಗೌರಮ್ಮನ ಚೀಟಿಯಿಂದ ಎಷ್ಟು ಮಂದಿ ವಂಚನೆಗೊಳಗಾಗಿದ್ದಾರೆ ಎನ್ನುವದು ಪೊಲೀಸರಿಗೂ ಇನ್ನೂ ನಿಖರವಾಗಿ ತಿಳಿದಿಲ್ಲ.

ಚೀಟಿಯಿಂದ ವಂಚನೆ ಹಾಗೂ ಮನೆದಳದ ಆಮಿಷ ಕ್ರಿಮಿನಲ್ ಪ್ರಕರಣದ ತನಿಖಾಧಿಕಾರಿಯಾಗಿ ಎನ್.ಕುಮಾರ್ ಆರಾಧ್ಯ ನೇಮಕಗೊಂಡಿದ್ದಾರೆ. ವಂಚನೆಗೆ ಸಹಕರಿಸಿದವರನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ.