ಸೋಮವಾರಪೇಟೆ,ಮಾ.26: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನಲ್ಲಿ ಪ್ರಗತಿಯಲ್ಲಿರುವ ಕಾಂಕ್ರೀಟ್ ಹಾಗೂ ಡಾಂಬರು ರಸ್ತೆ ಕಾಮಗಾರಿ ಅಸಮರ್ಪಕವಾಗಿದೆ ಎಂದು ಐಗೂರು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧಿಸಿದ ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ನಿಧಿ, ಜಿ. ಪಂ. ಹಾಗೂ ತಾ. ಪಂ.ನಿಂದ ಕಾಜೂರಿನಲ್ಲಿ ಒಟ್ಟು ರೂ. 6ಲಕ್ಷ ವೆಚ್ಚದಲ್ಲಿ 120 ಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಂಡಿದ್ದು, ಕ್ರಿಯಾಯೋಜನೆ ಯಂತೆ ಕಾಮಗಾರಿ ನಡೆದಿಲ್ಲ ಎಂದು ಜನಪ್ರತಿನಿಧಿಗಳು ಆರೋಪಿಸಿದರು.

ಐಗೂರು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ ಮಾತನಾಡಿ, ನೂತನ ಕಾಂಕ್ರೀಟ್ ರಸ್ತೆಯ ಎರಡೂ ಬದಿಗೆ ಮಣ್ಣು ತುಂಬಿಸಿಲ್ಲ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಗುಣಮಟ್ಟದ ಕಾಮಗಾರಿಯಾಗಿಲ್ಲ. ಈ ಬಗ್ಗೆ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಅಭಿಯಂತರ ವೀರೇಂದ್ರ ಅವರನ್ನು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಅರಣ್ಯ ಹಕ್ಕು ಸಮಿತಿಯ ಪದನಿಮಿತ್ತ ಸದಸ್ಯ ಮಚ್ಚಂಡ ಅಶೋಕ್ ಮಾತನಾಡಿ, ಗ್ರಾಮ ಸಡಕ್ ಯೋಜನೆಯಲ್ಲಿ ಕಾಜೂರು ಮುಖ್ಯ ರಸ್ತೆಯಿಂದ ಯಡವಾರೆ ಹಾರಂಗಿ ರಸ್ತೆಯನ್ನು ರೂ. 4ಲಕ್ಷ ವೆಚ್ಛದಲ್ಲಿ ಡಾಂಬರ್ ರಸ್ತೆಯ ರಿಪೇರಿ ಕಾರ್ಯ ನಡೆದಿದೆ. ಆದರೆ, ಕಾಮಗಾರಿ ಸರಿಯಾಗಿಲ್ಲ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಅಭಿಯಂತರರನ್ನು ಆಗ್ರಹಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ರಾಯ್, ಗ್ರಾಮಸ್ಥರಾದ ಬಾರನ ಪ್ರಮೋದ್, ಎಸ್.ಎನ್. ಯೋಗೇಶ್, ವರದರಾಜ್ ಅರಸ್, ವಿಶ್ವನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಇಂದು ವಿದ್ಯುತ್ ವ್ಯತ್ಯಯ

ಮಡಿಕೇರಿ, ಮಾ.26: ಮಡಿಕೇರಿ 66/11ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಹೋಗುವ ಎಫ್2 ಗದ್ದಿಗೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವದರಿಂದ ತಾ. 27 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು.

ಗದ್ದಿಗೆ, ಮಹದೇವಪೇಟೆ, ಮಾರ್ಕೆಟ್, ರಾಣಿಪೇಟೆ, ಕಾನ್ವೆಂಟ್ ಜಂಕ್ಚನ್, ಮಲ್ಲಿಕಾರ್ಜುನ ನಗರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿಶ್ವ ಮಹಿಳಾ ದಿನಾಚರಣೆ

ಗೋಣಿಕೊಪ್ಪಲು, ಮಾ. 26: ಇಲ್ಲಿನ ಕಾವೇರಿ ಎಜುಕೇಷನ್ ಸೊಸೈಟಿ ಹಾಗೂ ಗೋಣಿಕೊಪ್ಪಲು ಕಾವೇರಿ ಕಾಲೇಜು ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕಿ ಡಾ. ಜೆ. ಪೊನ್ನಮ್ಮ ಮಾಚಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರಿನ ತಲಕಾವೇರಿ ಮಹಿಳಾ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ಡಾ. ನಳಿನಿ ತಮ್ಮಯ್ಯ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಪಟ್ಟಡ ಪೂವಣ್ಣ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಉಪಸ್ಥಿತರಿದ್ದರು.

ಈ ಸಂದರ್ಭ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ 25 ವರ್ಷ ಪೂರೈಸಿದ ಎಂ.ಕೆ. ಪದ್ಮ, ಅಡ್ಡಂಡ ಅನಿತಾ ಕಾರ್ಯಪ್ಪ, ಡಾ. ನಳಿನಿ ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ಅಂತರ ಕಾಲೇಜು ಮಹಿಳಾ ಸಿಬ್ಬಂದಿಗಳಿಗಾಗಿ ಸ್ಪರ್ಧೆಗಳನ್ನು ನಡೆಸಲಾಯಿತು. ಕಾವೇರಿ ಕಾಲೇಜು ತಂಡ ಗುಂಪು ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಜನಪದ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿತು.

ಮಹಿಳಾ ಸಿಬ್ಬಂದಿಗಳಿಂದ ವಿವಿಧ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬಂದವು. ವಿವಿಧ ವಿನೋದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾವೇರಿ ವಿದ್ಯಾಸಂಸ್ಥೆಯ ನಿವೃತ್ತ ಸಿಬ್ಬಂದಿಗಳು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಕುಸುಮ್ ಮತ್ತು ವಸಂತಿ ಪ್ರಾರ್ಥಿಸಿದರು. ಸಂಚಾಲಕಿ ಪ್ರೊ. ಎ.ಎಂ. ಕಮಲಾಕ್ಷಿ ಸ್ವಾಗತಿಸಿದರು. ಸೀಮಾ, ನಿಶಾ ಹಾಗೂ ನಯನಾ ತಮ್ಮಯ್ಯ ನಿರೂಪಿಸಿದರು. ಕೆ.ಕೆ. ಚಿತ್ರಾವತಿ ವಂದಿಸಿದರು.