ಸೋಮವಾರಪೇಟೆ,ಮಾ.26 : ಎಲ್ಲಾ ಜೀವಿಗಳಿಗೂ ಅಗತ್ಯವಾಗಿರುವ ನೀರಿಗಾಗಿ ಮುಂದಿನ ದಿನಗಳಲ್ಲಿ ಯುದ್ಧ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಎಚ್ಚರಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀರಿಲ್ಲದೆ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಜೀವಜಲವನ್ನು ಸಂರಕ್ಷಿಸುವದು ಸಾಮಾಜಿಕ ಜವಾಬ್ದಾರಿ. ನದಿ ಮೂಲಗಳು ಕಲುಷಿತಗೊಂಡು ಶೇ.80ರಷ್ಟು ನೀರು ಕುಡಿಯಲು ಯೋಗ್ಯವಲ್ಲ ಎಂಬ ವೈಜ್ಞಾನಿಕ ವರದಿಗಳು ಬರುತ್ತಿವೆ. ಈ ಬಗ್ಗೆ ಎಚ್ಚರಗೊಳ್ಳದಿದ್ದರೆ ನೀರಿಗಾಗಿ ಯುದ್ಧ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಸಿವಿಲ್ ನ್ಯಾಯಾಧೀಶರಾದ ಶ್ಯಾಂ ಪ್ರಕಾಶ್ ಮಾತನಾಡಿ, ಈಗ ಶುದ್ಧ ನೀರಿನ ಅಭಾವ ಕಾಡುತ್ತಿದೆ. ಕಲುಷಿತ ನೀರನ್ನು ಶುದ್ಧೀಕರಿಸಿ ಕುಡಿಯುವಂತಾಗಿದೆ. ಜೀವಜಲದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ನದಿದಂಡೆಗಳಲ್ಲಿ ಹೋಂ ಸ್ಟೇ, ರೆಸಾರ್ಟ್, ಫ್ಯಾಕ್ಟರಿ, ಮಾಂಸದಂಗಡಿಗಳಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಿದರು. ತ್ಯಾಜ್ಯ, ರಾಸಾಯನಿಕಗಳು ಯಥೇಚ್ಚವಾಗಿ ನೀರಿನ ಮೂಲ ಸೇರುತ್ತಿರುವದರಿಂದ ಮುಂದೆ ಗಂಡಾಂತರವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಹೇಮಚಂದ್ರ ಉಪಸ್ಥಿತರಿದ್ದರು.