ಕುಶಾಲನಗರ, ಮಾ 26: ಕುಶಾಲನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು ನದಿ ತಟಗಳಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಮೋಟಾರ್ ಪಂಪ್‍ಗಳನ್ನು ತಕ್ಷಣ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಅಪ್ಪಚ್ಚುರಂಜನ್ ಹೇಳಿದರು.

ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಬಗ್ಗೆ ಇತ್ತೀಚೆಗೆ ಶಾಸಕ ಅಪ್ಪಚ್ಚುರಂಜನ್ ಉಪಸ್ಥಿತಿಯಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಲಿಹೊಳೆ, ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಿ ಆ ಮೂಲಕ ಪಟ್ಟಣದ ನಾಗರೀಕರಿಗೆ ನೀರು ಒದಗಿಸಲು ಈಗಾಗಲೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಹಾರಂಗಿ ಜಲಾಶಯದಿಂದ ಬೃಹತ್ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಎಂ.ಚರಣ್ ಮಾತನಾಡಿ, ಬೈಚನಹಳ್ಳಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸುವ ಮೂಲಕ ನೀರಿನ ಸಂಗ್ರಹಕ್ಕೆ ಶಾಶ್ವತ ಕ್ರಮಕೈಗೊಳ್ಳಬೇಕಿದೆ. ಹಾರಂಗಿ ಜಲಾಶಯದಿಂದ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ಯೋಜನೆ ರೂಪಿಸುವಂತೆ ಶಾಸಕರಲ್ಲಿ ಮನವಿ ಸಲ್ಲಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ, ಸದಸ್ಯರಾದ ಹೆಚ್.ಡಿ.ಚಂದ್ರು, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಕಂದಾಯಾಧಿಕಾರಿ ಮಧು, ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಎಂ.ಎನ್.ಕುಮಾರಪ್ಪ, ಪುಂಡರೀಕಾಕ್ಷ, ಪ್ರವೀಣ್, ವೈಶಾಖ್, ವಿ.ಆರ್.ಮಂಜುನಾಥ್, ಅಮೃತ್‍ರಾಜ್ ಮತ್ತಿತರರು ಇದ್ದರು.