ಒಡೆಯನಪುರ, ಮಾ. 25: ಸಮೀಪದ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಚಿಕ್ಕ ಕೊಳತ್ತೂರು ಗ್ರಾಮದ ಸಿ.ಕೆ. ರಾಮು ಎಂಬವರು ಗ್ರಾಮದ ಸಾರ್ವಜನಿಕ ಕೆರೆಗೆ ಸೇರಿದ ಜಾಗದಲ್ಲಿ ನಿವೇಶನ ಕಟ್ಟುವ ಸಲುವಾಗಿ ಮರಗಳನ್ನು ಕಡಿದು ಪರಿಸರವನ್ನು ಹಾಳು ಮಾಡುತ್ತಿರುವದಾಗಿ ಗ್ರಾಮಸ್ಥರು ಪ್ರತಿಭಟಿಸಿದರು. ಸಿ.ಕೆ.ರಾಮು ಎಂಬವರು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗ್ರಾಮದ ಸಾರ್ವಜನಿಕ ಕೆರೆಗೆ ಸೇರಿದ ಜಾಗದಲ್ಲಿದ್ದ ದೊಡ್ಡ ಮರಗಳನ್ನು ಕಡಿದು ಹಾಕಿದ್ದಾರೆ, ನಿವೇಶನ ಕಟ್ಟುವ ಸಲುವಾಗಿ ಗ್ರಾ.ಪಂ.ಯ ಅನುಮತಿ ಇಲ್ಲದೆ ಕೆರೆಯ ಮಣ್ಣನ್ನು ಜೆಸಿಬಿ ಮೂಲಕ ಎತ್ತಲಾಗಿದೆ, ಈ ಕುರಿತು ಗ್ರಾಮಸ್ಥರು ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಅಧಿಕಾರಿಗಳು ಆತನ ಮೇಲೆ ಕ್ರಮಕೈಗೊಳ್ಳದ ಹಿನೆÀ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್, ಪಿಡಿಒ ವೇಣುಗೋಪಾಲ್, ಗ್ರಾಮಸ್ಥರು ನೀಡಿದ ದೂರು ಅರ್ಜಿಯನ್ನು ಸ್ವೀಕರಿಸಿದರು. ಈ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸಿ.ಎಸ್.ಸತೀಶ್, ಹನೀಫ್, ಶೇಷಪ್ಪ, ಚಂದ್ರು, ಬೇಬಿ, ಸುನೀತಾ ಮುಂತಾದವರು ಪಾಲ್ಗೊಂಡಿದ್ದರು.