ವೀರಾಜಪೇಟೆ, ಮಾ. 25: ಚುನಾವಣೆ ನಿಮಿತ್ತ ಬಿ.ಜೆ.ಪಿ.ಯ ನಾಲ್ಕು ಬ್ಲಾಕ್ ಸೇರಿದಂತೆ ಒಂದು ಶಕ್ತಿ ಕೇಂದ್ರವನ್ನು ರಚಿಸಬೇಕೆಂದು ಕೇಂದ್ರ ಹೆದ್ದಾರಿ ವಿಭಾಗದ ರಾಜ್ಯ ಸಚಿವರು, ಮೈಸೂರು-ಕೊಡಗು ವಿಭಾಗದ ಬಿ.ಜೆ.ಪಿ.ಯ ಚುನಾವಣಾ ವೀಕ್ಷಕರಾದ ಮನ್‍ಶುಕ್ ಎಲ್. ಮಾಂಡವಿ ಸಲಹೆಯಿತ್ತರು.

ವೀರಾಜಪೇಟೆ ಡಿ.ಸಿ.ಸಿ. ಬ್ಯಾಂಕ್ ಶಾಖೆಯ ಮೊದಲ ಅಂತಸ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಶಕ್ತಿ ಕೇಂದ್ರದ ಆಡಳಿತ ಮಂಡಳಿ ಹಾಗೂ ಕಾರ್ಯಕರ್ತರು ಸೇರಿ ವಾರದಲ್ಲಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೂರು ದಿನಗಳು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಈಗಿನ ಬಿ.ಜೆ.ಪಿ.ಯ ಕೇಂದ್ರ ಸರಕಾರದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಜನತೆಗಾಗಿ ಕೈಗೊಂಡಿರುವ ಎಲ್ಲ ಜನಪರ ಯೋಜನೆಗಳನ್ನು ವಿವರವಾಗಿ ಮತದಾರರಿಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕರ್ತರ ಸಭೆಯಲ್ಲಿ ಪ್ರಮುಖರಾಗಿ ಶಾಸಕ ಕೆ.ಜಿ. ಬೋಪಯ್ಯ, ರೀನಾ ಪ್ರಕಾಶ್, ಅರುಣ್ ಭೀಮಯ್ಯ, ಕಾಂತಿ ಸತೀಶ್, ಸ್ಮಿತಾ ಪ್ರಕಾಶ್ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು. ಕಾರ್ಯಕರ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿತ್ತು.