ಮಡಿಕೇರಿ, ಮಾ. 25: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ತ್ಯಾಗ್ ಬಾಯ್ಸ್ ಇವರ ಸಂಯುಕ್ತಾಶ್ರಯದಲ್ಲಿ ಮಾ.27 ರಿಂದ ಏ. 1ರ ವರೆಗೆ 15ನೇ ವರ್ಷದ ‘ಕೊಡಗು ಜಿಲ್ಲಾ ಮುಸ್ಲಿಂ ಕಪ್’ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಜಿಲ್ಲಾ ಕಾರ್ಯದರ್ಶಿ ಸೈಫ್ ಆಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ತ್ಯಾಗ್ ಬಾಯ್ಸ್‍ನ ಅಧ್ಯಕ್ಷ ಜನಾಬ್ ನಾಸಿರ್ ಅವರ ಅಧ್ಯಕ್ಷತೆಯಲ್ಲಿ ಆರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಹಾಸನದ ಉಸ್ತುವಾರಿ ಸಚಿವರಾದ ಎ.ಮಂಜು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕೊಡಗು ಜಿಲ್ಲಾ ಮುಸ್ಲಿಂ ಸೋಟ್ರ್ಸ್ ಅಸೋಸಿಯೇಷನ್‍ನ ಸ್ಥಾಪಕಾಧ್ಯಕ್ಷ ಜನಾಬ್ ರಶೀದ್ ಎಡಪಾಲ, ಐ.ಎನ್.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕೊನೆಯ ದಿನವಾದ ಏ.1 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಐ.ಎನ್.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ಮಾಜಿ ಸಚಿವ ಜೀವಿಜಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಕಳೆದ ಬಾರಿ 120 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ 137 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿವೆ ಎಂದು ಸೈಫ್ ಆಲಿ ಮಾಹಿತಿ ನೀಡಿದರು. ಮೊದಲ ಬಹುಮಾನ 55,555 ರೂ. ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 33,333 ರೂ. ನಗದು ಹಾಗೂ ಟ್ರೋಫಿ, ಮೂರನೇ ಬಹುಮಾನ 11,111 ರೂ. ಮತ್ತು ಟ್ರೋಫಿ ಹಾಗೂ ನಾಲ್ಕನೇ ಬಹುಮಾನ 8,888 ನಗದು ಹಾಗೂ ಟ್ರೋಫಿಯನ್ನು ನೀಡಲಾಗುವದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‍ನ ಅಧ್ಯಕ್ಷ ಅಬ್ದುಲ್ ಖಾದರ್, ತ್ಯಾಗ್ ಬಾಯ್ಸ್ ಅಧ್ಯಕ್ಷ ನಾಸಿರ್ ಮಡಿಕೇರಿ, ಕಾರ್ಯದರ್ಶಿ ಹ್ಯಾರೀಸ್ ಹಾಗೂ ಸದಸ್ಯ ಫಹಾದ್ ಉಪಸ್ಥಿತರಿದ್ದರು.