ಸೋಮವಾರಪೇಟೆ, ಮಾ. 24: ಶ್ರೀ ರಾಮನವಮಿ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. 25ರಂದು (ಇಂದು) ಸೋಮವಾರಪೇಟೆಯಲ್ಲಿ ನಡೆಯಲಿರುವ ಶ್ರೀರಾಮ ನವಮಿ ಉತ್ಸವಕ್ಕೆ ಇಡೀ ಪಟ್ಟಣ ಕೇಸರಿಮಯವಾಗಿದೆ.ಕಳೆದ ಕೆಲ ವರ್ಷಗಳಿಂದ ಅದ್ಧೂರಿಯಾಗಿ ರಾಮ ನವಮಿಯನ್ನು ಆಚರಿಸಲಾಗುತ್ತಿದ್ದು, ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲ ಗ್ರಾಮಗಳಿಂದಲೂ ರಾಮನ ರಥಗಳು ಪಟ್ಟಣಕ್ಕೆ ಆಗಮಿಸಲಿವೆ.ಕಾರ್ಯಕ್ರಮ ನಡೆಯುವ ಆಂಜನೇಯ ದೇವಾಲಯ ಮತ್ತು ಪಟ್ಟಣದಲ್ಲಿ ಕೇಸರಿ ಧ್ವಜಗಳನ್ನು ಕಟ್ಟಲಾಗಿದ್ದು, ಎಲ್ಲೆಲ್ಲೂ ಕೇಸರಿ ಬಣ್ಣ ಕಾಣುತ್ತಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕೇಸರಿ ಬಂಟಿಗ್ಸ್‍ನ್ನು ಆಕರ್ಷಕವಾಗಿ ಕಟ್ಟಲಾಗಿದ್ದು, ಕಾರ್ಯಕರ್ತರು ತಮ್ಮ ಬೈಕ್, ಅಂಗಡಿ, ಮನೆಗಳ ಮೇಲೆಯೂ ಧ್ವಜ ಅಳವಡಿಸಿದ್ದಾರೆ.

ತಾ. 25ರಂದು (ಇಂದು) ಸಂಜೆ 5.30ಕ್ಕೆ ಇಲ್ಲಿನ ಆಂಜನೇಯ ದೇವಾಲಯ ಆವರಣದಲ್ಲಿ ಜಾಗೃತಿ ಸಭೆ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ವಹಿಸಲಿದ್ದು, ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ. ಗೋಪಾಲ್, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಂ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

6.30ಕ್ಕೆ ಶ್ರೀರಾಮನ ವಿಗ್ರಹದ ಶೋಭಾಯಾತ್ರೆ ನಡೆಯಲಿದ್ದು, ಅಕ್ಕಪಕ್ಕದ ಗ್ರಾಮಗಳಿಂದಲೂ ರಥಗಳು ಆಗಮಿಸಲಿವೆ. ಜಾನಪದ ಕಲಾತಂಡಗಳೊಂದಿಗೆ, ಡೊಳ್ಳು ಕುಣಿತ, ಸುಗ್ಗಿ ಕುಣಿತ, ಪೂಜಾ ಕುಣಿತ, ವೀರಗಾಸೆ, ಚಂಡೆ ಮತ್ತು ಜಾಗಟೆ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಎಂ.ಬಿ. ಉಮೇಶ್ ತಿಳಿಸಿದ್ದಾರೆ.

ಚಿತ್ರ24ಎಸ್‍ಪಿಟಿ04: ಕೇಸರಿಮಯವಾಗಿರುವ ಪಟ್ಟಣ

ಶಾಂತಿಯುತ ಆಚರಣೆಗೆ ಮನವಿ

ಪಟ್ಟಣದಲ್ಲಿ ನಡೆಯುವ ರಾಮ ನವಮಿ ಹಾಗೂ ಶೋಭಾಯಾತ್ರೆಯನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕೆಂದು ಠಾಣಾಧಿಕಾರಿ ಶಿವಣ್ಣ ಮನವಿ ಮಾಡಿದರು.

ರಾಮ ನವಮಿ ಪ್ರಯುಕ್ತ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗುವದು. ಪ್ರತಿಯೊಬ್ಬರೂ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ನೀಡಬಾರದು. ತಾ.25ರಂದು ಪಟ್ಟಣದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ಭಾನುವಾರ ಬೆಳಿಗ್ಗೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ, ಸಂಜೆ ಧರ್ಮ ಜಾಗೃತಿ ಸಭೆ, ನಂತರ ಪಟ್ಟಣ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ರಾಮ ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ಹೇಳಿದರು.

ಸಂಜೆ ಪಟ್ಟಣದ ಮಡಿಕೇರಿ ರಸ್ತೆ, ಸಿ.ಕೆ.ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣ, ತ್ಯಾಗರಾಜ ರಸ್ತೆ, ಎಂ.ಜಿ.ರಸ್ತೆ, ದೇವಸ್ಥಾನ ರಸ್ತೆ,

(ಮೊದಲ ಪುಟದಿಂದ) ಕ್ಲಬ್ ರಸ್ತೆಯಲ್ಲಿ ಶೋಭಾಯಾತ್ರೆ ನಡೆದು ಆಂಜನೇಯ ದೇವಾಲಯ ತಲುಪಲಿದೆ ಎಂದರು.

ಸಭೆಯಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರಾದ ಸಿ.ಪಿ.ಗೋಪಾಲ್, ಟಿ.ಕೆ.ರಮೇಶ್, ಸಂತೋಷ್‍ಕುಮಾರ್, ಕರ್ಕಳ್ಳಿ ರವಿ, ದರ್ಶನ್ ಜೋಯಪ್ಪ, ಉಮೇಶ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ದೊರೆ, ಐಎನ್‍ಟಿಯುಸಿ ಸಂಘಟನೆಯ ಹಸನಬ್ಬ, ಮಸೀದಿಯ ಪ್ರಮುಖರಾದ ಯಾಸ್ಮಿನ್ ಪಾಷ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ಶ್ರೀರಾಮಾಂಜನೇಯ ಉತ್ಸವ ಸಮಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ತಾ. 25ರಂದು (ಇಂದು) ರಾಮನವಮಿ ಉತ್ಸವವನ್ನು ಆಚರಿಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಸಿ.ಎನ್.ಸುಜಿತ್‍ಕುಮಾರ್ ತಿಳಿಸಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಶ್ರೀ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುವದು. ನಂತರ ಪಾನಕ ಮತ್ತು ಕೋಸಂಬರಿಯನ್ನು ವಿತರಿಸಲಾಗುವದು. ಸಂಜೆ ಭವ್ಯ ಅಲಂಕೃತ ಮಂಟಪದಲ್ಲಿ ರಾಮನ ಮೂರ್ತಿಯನ್ನು ಕುಳ್ಳಿರಿಸಿ ಬ್ಯಾಂಡ್‍ಸೆಟ್‍ನೊಂದಿಗೆ ನಗರದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮೂಲಕ ಆಂಜನೇಯ ದೇವಾಲಯದ ಉತ್ಸವ ಸಮಿತಿಯ ಮಂಟಪದೊಂದಿಗೆ ತೆರಳಲಾಗುವದು ಎಂದು ಸುಜಿತ್ ತಿಳಿಸಿದ್ದಾರೆ.