ಸೋಮವಾರಪೇಟೆ, ಮಾ. 25: ಹಳೆ ವೈಷಮ್ಯಕ್ಕೆ ಸಂಬಂಧಿಸಿದಂತೆ ಬೈಕ್‍ನಲ್ಲಿ ತೆರಳುತ್ತಿದ್ದ ಈರ್ವರು ಯುವಕನ್ನು ತಡೆದು ಹಲ್ಲೆ ನಡೆಸಿರುವ ಘಟನೆ ಪಟ್ಟಣದ ಜೇಸೀ ವೇದಿಕೆ ಮುಂಭಾಗ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಕಲ್ಕಂದೂರು ಗ್ರಾಮದ ಪ್ರಶಾಂತ್ ಎಂಬಾತ ತನ್ನ ಸ್ನೇಹಿತ ಅಖಿಲ್‍ನೊಡನೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ತಣ್ಣೀರುಹಳ್ಳ ಗ್ರಾಮದ ಯೂಸುಫ್ ಎಂಬವರ ಪುತ್ರ ರಿಯಾಜ್ ಎಂಬಾತ ಬೈಕ್ ತಡೆದು, ಬೇಲಿ ಕಂಬವನ್ನು ಸರಿಪಡಿಸುವ ವಿಚಾರದಲ್ಲಿ ಜಗಳ ತೆಗೆದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ.
ಇದನ್ನು ತಡೆಯಲು ಯತ್ನಿಸಿದ ಅಖಿಲ್‍ನ ಮೇಲೆ ರಿಯಾಜ್‍ನ ಜೊತೆಗಿದ್ದ ಮೂವರು ಹಲ್ಲೆ ನಡೆಸಿದ್ದು, ತಕ್ಷಣ ಸ್ಥಳದಲ್ಲಿದ್ದವರು ಆಗಮಿಸಿ ಜಗಳ ಬಿಡಿಸಿದ್ದಾರೆ. ಹಲ್ಲೆ ಮಾಡಿದ ನಂತರ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರಶಾಂತ್ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ರಿಯಾಜ್ ಸೇರಿದಂತೆ ಇತರ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆ 323,324,34 ಅನ್ವಯ ಮೊಕದ್ದಮೆ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.