ಮಡಿಕೇರಿ, ಮಾ. 24: ಜಿಲ್ಲಾ ಕೇಂದ್ರದಲ್ಲಿರುವ ಮಡಿಕೇರಿ ನಗರಸಭೆಯ ಆಡಳಿತ ವೈಖರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಪ್ರಮುಖ ಪಕ್ಷಗಳ ಸದಸ್ಯರುಗಳ ಅಭಿಪ್ರಾಯ ಕುರಿತು ಇಲ್ಲಿನ ಪ್ರೆಸ್‍ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ನೇರ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲದಿರುವದು, ನಗರಸಭೆ ವಿರುದ್ಧ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಸಮಾಧಾನ, ಸಾರ್ವಜನಿಕರ ತೆರಿಗೆ ಹಣ ಅಂದಾಜು ರೂ. ಒಂದು ಕೋಟಿಯಷ್ಟು ಲೂಟಿಯೊಂದಿಗೆ ವಂಚಿಸಿರುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗದಿರುವ ಕುರಿತು ಅಸಮಾಧಾನ, ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ರಾಜಕೀಯ ಮೇಲಾಟ... ಇತ್ಯಾದಿ ಗಂಭೀರ ಚರ್ಚೆಗೆ ಎಡೆಯಾಯಿತು.ಸಂವಾದದಲ್ಲಿ ಮಾಧ್ಯಮ ಬಳಗದ ಪ್ರಶ್ನೆಗಳಿಗೆ ಉತ್ತರಿಸಿದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಮ್ಮ ಅಧಿಕಾರ ಅವಧಿಯಲ್ಲಿ ರೂ. 14.141 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ನಡೆಸಿದ್ದು, ಮುಖ್ಯವಾಗಿ ಖಾಸಗಿ ಬಸ್‍ನಿಲ್ದಾಣ, ಹೈಟೆಕ್ ಮಾರುಕಟ್ಟೆ ಮಹತ್ವದ ಸಾಧನೆಯೆಂದು ಬಣ್ಣಿಸಿದರು. ಈ ಎರಡೂ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಮಿಕ್ಕ ಕೆಲಸಗಳನ್ನು ಒಂದು ತಿಂಗಳಿನಲ್ಲಿ ಪೂರ್ಣಗೊಳಿಸಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆಯನ್ನು ಸಾರ್ವಜನಿಕ ಸೇವೆಗೆ ಕಲ್ಪಿಸುವ ಭರವಸೆ ನೀಡಿದರು.

ಮಡಿಕೇರಿ ಕುಂಡಾಮೇಸ್ತ್ರಿ ಯೋಜನೆಯ ಕುಡಿಯುವ ನೀರಿನ ಅನುಷ್ಠಾನಕ್ಕೆ ಈಗಾಗಲೇ ಅರಣ್ಯ ಇಲಾಖೆಯು ನಿರಾಕ್ಷೇಪಣಾ ಪತ್ರ ಸಲ್ಲಿಸಿದ್ದು, ನಿಗದಿತ ಸ್ಥಳದಲ್ಲಿ ಮರಳು ಮೂಟೆಗಳೊಂದಿಗೆ ನೀರು ಸಂಗ್ರಹಾಗಾರಕ್ಕೆ ಶೀಘ್ರವೇ ಅಗತ್ಯ ಕಾಯಕಲ್ಪ ನೀಡಲಾಗುವದು ಎಂದು ಸ್ಪಷ್ಟಪಡಿಸಿದರು.

ಬೈಲಾ ಸಭೆ: ಅಲ್ಲದೆ ಕಾವೇರಿ ಕಲಾಕ್ಷೇತ್ರದ ತಕ್ಷಣ ದುರಸ್ತಿ ಮತ್ತು ಭವಿಷ್ಯದಲ್ಲಿ ರೂ. 8 ಕೋಟಿ ಯೋಜನೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಗಮನ ಹರಿಸಲಾಗುವದು ಎಂದರು. ಮಡಿಕೇರಿ ದಸರಾ ಸಮಿತಿಗೆ ನೂತನ ಬೈಲಾ ಸಂಬಂಧ ಸದ್ಯವೇ ಸಭೆ ಆಯೋಜಿಸಿ ಸೂಕ್ತ ನಿಯಮಗಳನ್ನು ಜಾರಿಗೆ ತರಲು ಕಾಳಜಿ ವಹಿಸುವದಾಗಿಯೂ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ರಸ್ತೆ ಅಭಿವೃದ್ಧಿ: ಮಡಿಕೇರಿ ರಸ್ತೆಗಳ ಗುಂಡಿ ಮುಚ್ಚಲು ರೂ. 23 ಲಕ್ಷದ ಕಾಮಗಾರಿಯೊಂದಿಗೆ, ನಗರೋತ್ಥಾನ ಯೋಜನೆಯಡಿ ರೂ. 18 ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ ಮತ್ತು ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವದು ಎಂದು ಇನ್ನೊಂದು ಪ್ರಶ್ನೆಗೆ ವಿವರಣೆ ನೀಡಿದರು.

ಒಂದೇ ನಾಣ್ಯದ 2 ಮುಖ: ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಚುಮ್ಮಿ ದೇವಯ್ಯ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಬಣ್ಣಿಸಿದರು. ಬಹುತೇಕ ನಿಯಮಗಳನ್ನು ನಗರಸಭೆ ಅನುಷ್ಠಾನಗೊಳಿಸಿದರೆ, ಕಾನೂನಿನ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಅನುಮೋದನೆ ನೀಡುವದಷ್ಟೇ ಕೆಲಸವೆಂದು ಮಾರ್ನುಡಿದರು.

ಕೊಡಗಿನಂತಹ ಗುಡ್ಡಗಾಡು ಪ್ರದೇಶಕ್ಕೆ ರಾಜ್ಯ ಸರಕಾರದ ಗೃಹ ಯೋಜನೆ ನೀತಿ ತೊಡಕಾಗಿದ್ದು, ಮನೆ ನಿವೇಶನಗಳ ಪರಿವರ್ತನೆ ಹಾಗೂ 1976ರ ಇತ್ತೀಚಿನ ವಸತಿ ಯೋಜನೆಗೆ ಹೊಸ ನೀತಿ ಅಡ್ಡಿಯಾಗಿದ್ದು, ಕೌಟುಂಬಿಕ ಆಸ್ತಿ ವಿಂಗಡಣೆಗೂ ತೊಡಕುಗಳು ಜನರಿಗೆ ಎದುರಾಗಿರುವ ಬಗ್ಗೆ ಮನವಿಗಳನ್ನು ಸಲ್ಲಿಸಿದರೂ, ಸರಕಾರದಿಂದ ಉತ್ತರವಿಲ್ಲವೆಂದು ವಿಷಾದಿಸಿದರು.

(ಮೊದಲ ಪುಟದಿಂದ) ತಾನು ‘ಮೂಡಾ’ದಿಂದ ರೂ. 20 ಲಕ್ಷದ ಮಹತ್ವಾಕಾಂಕ್ಷೆಯ ವಿದ್ಯುತ್ ದೀಪ ಅಳವಡಿಕೆ ಯೋಜನೆ ಸಿದ್ಧಗೊಳಿಸಿ ನಗರಸಭೆಗೆ ಕಳುಹಿಸಿದ್ದರೂ, ರಾಜಾಸೀಟ್ ಮಾರ್ಗದ ಈ ಅಲಂಕಾರಿಕ ಬೆಳಕಿನ ವ್ಯವಸ್ಥೆಗೆ ಇನ್ನು ಸಮ್ಮತಿ ನೀಡಿಲ್ಲವೆಂದು ಅಸಮಾಧಾನ ಹೊರ ಹಾಕಿದರು.

ಹಣಕ್ಕೆ ಕೊರತೆಯಿಲ್ಲ: ‘ಮೂಡಾ’ದಿಂದ ಅಭಿವೃದ್ಧಿ ಯೋಜನೆಗೆ ಈ ಹಿಂದೆ ಸಾರ್ವಜನಿಕರಿಂದ ನಿವೇಶನ ಬಾಬ್ತು ಸಂಗ್ರಹಿಸಿರುವ ನಿಧಿಯ ಸಹಿತ ಸಾಕಷ್ಟು ಹಣವಿದ್ದು, ಕೆರೆಗಳ ಅಭಿವೃದ್ಧಿಗೂ ರೂ. 2.50 ಕೋಟಿಯಷ್ಟು ಕಾಯ್ದಿರಿಸಲಾಗಿದೆ; ಈ ಹಣ ಬಳಕೆ ಮಾಡಲು ವಿಶಾಲ ಕೆರೆಗಳ ಕೊರತೆ ನಗರ ವ್ಯಾಪ್ತಿಯಲ್ಲಿದೆ ಎಂದು ಅಸಹಾಯಕತೆ ತೋಡಿಕೊಂಡರು. ನಗರಸಭೆ ಸ್ಪಂದಿಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಸತಿ ಯೋಜನೆ: ಖಾಸಗಿ ನಿವೇಶನಗಳನ್ನು ಖಾಸಗಿ ಜಾಗಗಳಲ್ಲಿ ವಿಸ್ತರಿಸಲು ಪ್ರಾಧಿಕಾರಕ್ಕೆ ಅವಕಾಶವಿದು; ಸಾರ್ವಜನಿಕ ಹೂಡಿಕೆದಾರರಿಗೆ ಈ ಯೋಜನೆಯಡಿ ರಸ್ತೆ, ಚರಂಡಿ, ಉದ್ಯಾನ ಇತ್ಯಾದಿ ಸೌಕರ್ಯಕ್ಕೆ ಅರ್ಧದಷ್ಟು ಜಾಗ ಕಳೆದುಕೊಳ್ಳುವ ಆತಂಕದಿಂದ ಯಾರೂ ಮುಂದೆ ಬರುತ್ತಿಲ್ಲವೆಂದು ಮೂಡಾ ಅಧ್ಯಕ್ಷರು ಸ್ಪಷ್ಟೀಕರಣ ನೀಡಿದರು.

ನಗರಸಭೆ ನಿರ್ಲಕ್ಷ್ಯ : ಮಡಿಕೇರಿಯಲ್ಲಿ ಸಾಕಷ್ಟು ಅನಧಿಕೃತ ಕಟ್ಟಡಗಳು ಹಾಗೂ ತಾತ್ಕಾಲಿಕ ನೆಪದಲ್ಲಿ ಬಿಡಾರಗಳು ತಲೆಯೆತ್ತುತ್ತಿದ್ದು, ಪ್ರಾರಂಭಿಕ ಹಂತದಲ್ಲಿ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುವ ಪರಿಣಾಮ ಮೇಲಿಂದ ಮೇಲೆ ಕಟ್ಟಡಗಳು ತಲೆಯೆತ್ತುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಚುಮ್ಮಿ ದೇವಯ್ಯ, ಇಂಥವರಿಂದ ದುಪ್ಪಟ್ಟು ತೆರಿಗೆ ವಸೂಲಿ ಮಾಡುವ ರಾಜೀ ನೀತಿ ಸಮಸ್ಯೆಯ ಗಂಭೀರತೆಗೆ ಕಾರಣವೆಂದರು.

ಹಿಂದಿನ ಆಡಳಿತದ ಸಾಧನೆ: ಮಡಿಕೇರಿಗೆ ಶಾಶ್ವತ ಕುಡಿಯುವ ನೀರಿನ ಕುಂಡಾಮೇಸ್ತ್ರಿ ಯೋಜನೆ; ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ಮುಂತಾದ ಅಭಿವೃದ್ಧಿ ಕೆಲಸಗಳು ಹಿಂದಿನ ಬಿಜೆಪಿ ಆಡಳಿತದ ಮಾಜೀ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಅವಧಿಯದ್ದು ಎಂದು ಹಾಲೀ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸಮರ್ಥಿಸಿಕೊಂಡರು.

ಪ್ರಸಕ್ತ ಅಧ್ಯಕ್ಷರ ಅವಧಿಯಲ್ಲಿ ಸರಕಾರದಿಂದ ಯಾವದೇ ವಿಶೇಷ ಅನುದಾನ ತರುವಲ್ಲಿ ಅಸಾಧ್ಯವಾಗಿದ್ದು, ಇದ್ದಂತಹ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವದು ಸಾಧ್ಯವಾಗಿಲ್ಲ ಎಂದು ದೂರಿದರು. ಇನ್ನಾದರೂ ಉಳಿದಿರುವ ಅಲ್ಪ ಅವಧಿಗೆ ಅಧ್ಯಕ್ಷರು ಜನಪರ ಕಾಳಜಿಯೊಂದಿಗೆ ಕೆಲಸದಲ್ಲಿ ಆಸಕ್ತಿ ತೋರಬೇಕೆಂದು ಸಲಹೆ ನೀಡಿದರು.

ಉತ್ಸುಕತೆ ತೋರಿಲ್ಲ: ಮಡಿಕೇರಿಯಲ್ಲಿ ಹಳೆಯ ಮನೆಗಳ ನವೀಕರಣಕ್ಕೆ ನೂರಾರು ಅರ್ಜಿದಾರರು ಕಾಯುತ್ತಿದ್ದು, ರಾಜ್ಯ ಸರಕಾರದ ಕಾನೂನಿನ ತೊಡಕುಗಳ ನಿವಾರಣೆಗೆ ಸಂಬಂಧಿಸಿದ ಸಚಿವರ ಬಳಿ ನಿಯೋಗ ತೆರಳಿ ಜನರ ತೊಂದರೆ ಸರಿಪಡಿಸಲು ನಗರಸಭೆ ಮತ್ತು ಮೂಡಾ ಅಧ್ಯಕ್ಷರು ಉತ್ಸುಕತೆ ತೋರಿಲ್ಲವೆಂದು ಪ್ರಕಾಶ್ ದೂರಿದರು. ಈ ಆರೋಪ ಅಲ್ಲಗೆಳೆದ ಉಭಯ ಅಧ್ಯಕ್ಷರು ಈಗಾಗಲೇ ತಾವು ಸರಕಾರದ ಗಮನ ಸೆಳೆದಿರುವದಾಗಿ ಪ್ರತಿಪಾದಿಸಿದರು.

ಮತ್ತೊಮ್ಮೆ ತಮ್ಮ ಅಸಮಾಧಾನ ಮುಂದುವರೆಸಿದ ಟಿ.ಎಸ್. ಪ್ರಕಾಶ್ ಈಗಿನ ಪರಿಸ್ಥಿತಿಯಲ್ಲಿ ಜನಹಿತಕ್ಕೆ ಪೂರಕ ಕೆಲಸಗಳು ಕುಂಠಿತಗೊಂಡಿರುವದನ್ನು ; ಮುಂದಿನ ವಿಧಾನಸಭಾ ಚುನಾವಣೆ ಬಳಿಕ ನೂತನ ಸರಕಾರದ ನೆರವಿನಿಂದ ಮುಂದುವರಿಸುವ ಆಶಯ ವ್ಯಕ್ತಪಡಿಸಿದರು.

ಕೆ.ಎಂ.ಬಿ. ಮೆಲುಕು: ಪ್ರಸಕ್ತ ಜೆಡಿಎಸ್ ಸದಸ್ಯ ಕೆ.ಎಂ. ಗಣೇಶ್ ಮಾತನಾಡಿ, ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಆ ಸ್ಥಾನಕ್ಕೇರಲು ತಾನೂ ಒಬ್ಬ ಕಾರಣನಾಗಿದ್ದರೂ, ವೈಯಕ್ತಿಕ ದ್ವೇಷದಿಂದ ತನ್ನ ವಾರ್ಡ್ ಅಭಿವೃದ್ಧಿಗೂ ತೊಡಕಾಗಿದ್ದಾರೆ ಎಂದು ನೇರ ದೂರಿದರು. ನಗರದ ಬಸ್ ನಿಲ್ದಾಣ, ಮಾರುಕಟ್ಟೆ, ಆಸ್ಪತ್ರೆಯ ಸುರಂಗ ಮಾರ್ಗ, ಖಾಸಗಿ ಬಸ್ ನಿಲ್ದಾಣದ ಬಳಿ ಶಾಲಾ ರಸ್ತೆಯಿಂದ ರಾಜ್ಯ ಸಾರಿಗೆ ನಿಲ್ದಾಣಕ್ಕೆ ಸುರಂಗ ಹಾದಿಯ ಕನಸು 2004 ರಿಂದಲೂ ಇರುವಂಥದ್ದು ಎಂದು ಮೆಲುಕು ಹಾಕಿದರು.

ಕೆಲವು ವರ್ಷಗಳ ಹಿಂದೆ ಅಧ್ಯಕ್ಷರಾಗಿದ್ದಾಗ ಕಾಲೇಜು ರಸ್ತೆ ವಿಸ್ತರಣೆ ಇತ್ಯಾದಿಯಲ್ಲಿ ತೋರಿದ ಆಸಕ್ತಿಯನ್ನು ಕಾವೇರಮ್ಮ ಸೋಮಣ್ಣ ಈಗಿನ ಅವಧಿಯಲ್ಲಿ ತೋರಿಲ್ಲವೆಂದು ವ್ಯಾಖ್ಯಾನಿಸಿದ ಅವರು; ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ಬಳಿ ತೆರಳಿ ವಿಶೇಷ ಅನುದಾನ ಕ್ರೋಢೀಕರಿಸುವಂತೆಯೂ ಸಲಹೆ ನೀಡಿದರು. ಮಡಿಕೇರಿ ಒಳಚರಂಡಿ ವ್ಯವಸ್ಥೆ 2018 ಕಳೆದರೂ ಮುಗಿಯದಂತಾಗಿದೆ ಎಂದು ಬೊಟ್ಟು ಮಾಡಿದರು. ನಿವೇಶನ ಸಂಬಂಧ ಪಾರಂ-3 ಗೊಂದಲದಿಂದ ನಮ್ಮ ಅಜ್ಜ, ಮುತ್ತಾತಂದಿರ ಕಾಲದಿಂದ ಅನುಭವಿಸಿಕೊಂಡು ಬಂದಿರುವ ಆಸ್ತಿಗೂ ಇಂದು ತೊಂದರೆ ಎದುರಾಗಿದೆ ಎಂದು ವಿಷಾದಿಸಿದರು.

ನಗರಸಭೆ ಕಾರ್ಯಾಲಯಕ್ಕೆ ಹೋಗಲು ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೊಂದಾಣಿಕೆ ಕೊರತೆ: ನಗರಸಭೆಯಿಂದ ಬಹುತೇಕ ಸಮಸ್ಯೆಗಳಿಗೆ ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳ ನಡುವಿನ ಹೊಂದಾಣಿಕೆ ಕೊರತೆ ಕಾರಣವೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಬೊಟ್ಟು ಮಾಡಿದರು. ಪರಿಣಾಮ ಯಾವದೇ ವಾರ್ಡ್‍ನಲ್ಲಿ ಜನಪರ ಕೆಲಸ ಸಾಧ್ಯವಾಗದೆ, ಆಯಾ ಸದಸ್ಯರು ಕೂಡ ತಮ್ಮ ವಾರ್ಡ್ ಜನತೆಯಿಂದ ದೂಷಣೆ ಎದುರಿಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಉದಾಹರಣೆಗೆ ನಗರಸಭೆಯಿಂದ ಅನತಿ ದೂರ ಪೊಲೀಸ್ ಠಾಣೆಯ ಬಳಿ ಅನಧಿಕೃತ ಕಟ್ಟಡ ತೆರವಿಗೆ ನ್ಯಾಯಾಲಯ ಆದೇಶಿಸಿದ್ದರೂ, ಇದುವರೆಗೆ ಅಧ್ಯಕ್ಷರು ಕ್ರಮ ಕೈಗೊಂಡಿಲ್ಲವೆಂದು ದೂಷಿಸಿದರು. ಕಾವೇರಮ್ಮ ಸೋಮಣ್ಣ ಅವರನ್ನು ಯಾರೋ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಕೈಗೊಂಬೆಯಂತೆ ಆಡಿಸುತ್ತಿದ್ದಾರೆ ಎಂದು ಕುಟುಕಿದರು. ಅಧ್ಯಕ್ಷರ ಕೊಠಡಿಗೂ ನಾವು ಪ್ರವೇಶಿಸುತ್ತಿಲ್ಲ ಎಂದು ಬಹಿರಂಗಪಡಿಸಿದರು. ತಾವುಗಳು ಯಾವದೇ ನಿರ್ಣಯ ಕೈಗೊಂಡರೂ, ಅದನ್ನು ಕಾರ್ಯರೂಪಕ್ಕೆ ಅಧ್ಯಕ್ಷರು ತರುತ್ತಿಲ್ಲವೆಂದು ರಮೇಶ್ ನೇರ ಆರೋಪ ಮಾಡಿದರು.

ಕೋಟಿ ಲೂಟಿಯಾಗಿದೆ: ನಗರದ ಜನತೆಯ ತೆರಿಗೆ ಹಣ ರೂಪಾಯಿ ಒಂದು ಕೋಟಿಯಷ್ಟು ಲೂಟಿಯಾಗಿದ್ದು, ಆರೋಪಿತ ಸಿಬ್ಬಂದಿಗಳಾದ ಸ್ವಾಮಿ ಹಾಗೂ ಸುಜಿತ್ ಕುಮಾರ್ ವಿರುದ್ಧ ಕ್ರಮ ಜರುಗಿಸುವಲ್ಲಿ ಅಧ್ಯಕ್ಷರು ಆಸಕ್ತಿ ತೋರುತ್ತಿಲ್ಲವೆಂದು ಸಂವಾದದಲ್ಲಿ ಎಸ್‍ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಆರೋಪಿಸಿದರು. ನಾಲ್ಕು ವರ್ಷಗಳಿಂದ ನಗರಸಭೆಯ ಲೆಕ್ಕ ತಪಾಸಣೆಯೂ ನಡೆಯದೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಬೊಟ್ಟು ಮಾಡಿದರು.

ಖಾಸಗಿ ಬಸ್ ನಿಲ್ದಾಣ, ಮಾರುಕಟ್ಟೆ ಇತ್ಯಾದಿ ಸಂಬಂಧ ಒಂದೆಡೆ ಬಿಜೆಪಿಯವರು ತಾವೇ ಎಲ್ಲದಕ್ಕೂ ಕಾರಣವೆನ್ನುತ್ತಿದ್ದು, ಆ ಬೆನ್ನಲ್ಲೇ ವಿರೋಧವನ್ನು ವ್ಯಕ್ತಪಡಿಸುತ್ತಾ, ಎಲ್ಲಾ ಕೆಲಸಗಳು ತಮ್ಮ ಅಧಿಕಾರದಲ್ಲೇ ನಡೆಯಬೇಕೆಂದು ಅಪೇಕ್ಷಿಸುವದು ಜನಹಿತದ ನಡೆಯಲ್ಲವೆಂದು ನೆನಪಿಸಿದರು.

ರಾಜಾಸೀಟ್ ವಾಹನ ಶುಲ್ಕ ವಸೂಲಿಯಂತಹ ಆರೋಪದಲ್ಲಿ ತಮ್ಮ ಹಾಗೂ ಪಕ್ಷದ ಯಾವದೇ ಪಾತ್ರವಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರಸಭೆ ತೆರಿಗೆ ಹಣ ದುರುಪಯೋಗ ಕುರಿತು ಅಧ್ಯಕ್ಷರು ಮತ್ತು ಆಯುಕ್ತರು ಸಾರ್ವಜನಿಕವಾಗಿ ಹೇಳಿಕೆ ನೀಡುವಂತೆಯೂ ಒತ್ತಾಯಿಸಿದರು. ಶಾಸಕರು ನಗರದ ಅಭಿವೃದ್ಧಿ ದೃಷ್ಟಿಯಿಂದ ಎಷ್ಟು ಬಾರಿ ನಗರಸಭೆಯ ಸಭೆಗಳಿಗೆ ಆಗಮಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು. ನಗರದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸುವದು ನಗರಸಭೆ - ‘ಮೂಡಾ’ ಗೊಂದಲದಿಂದ ಮನೆ ನವೀಕರಿಸುವವರಿಗೆ ಮತ್ತು ಹೊಸ ಮನೆ - ಕಟ್ಟಡ ನಿರ್ಮಿಸುವವರಿಗೆ ಎದುರಾಗಿರುವ ತೊಂದರೆ, ಭವಿಷ್ಯದಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿಯಿಂದ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಮಳೆಗಾಲಕ್ಕೆ ಮುನ್ನ ನೂತನ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಗೆ ಕಾಯಕಲ್ಪ ಇತ್ಯಾದಿ ಬಗ್ಗೆ ಅಭಿಪ್ರಾಯಗಳು ಕೇಳಿಬಂದವು. ಪ್ರೆಸ್‍ಕ್ಲಬ್ ಅಧ್ಯಕ್ಷರ ಎ.ಆರ್. ಕುಟ್ಟಪ್ಪ ಪ್ರಾಸ್ತಾವಿಕದೊಂದಿಗೆ, ವಿಘ್ನೇಶ್ ಭೂತನಕಾಡು ನಿರೂಪಿಸಿ, ಅಜಿತ್ ವಂದಿಸಿದರು.