ಮಡಿಕೇರಿ, ಮಾ. 24: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಖ್ಯಾತರಾದ ಶ್ರೀ ರವಿಶಂಕರ್ ಗುರೂಜಿ ಅವರು ತಾ. 26 ರಂದು (ನಾಳೆ) ಸಂಜೆ ಮಡಿಕೇರಿಗೆ ಭೇಟಿ ನೀಡಲಿದ್ದಾರೆ. ಸಂಜೆ 6.30ರ ಸುಮಾರಿಗೆ ಆಗಮಿಸಲಿರುವ ಗುರೂಜಿ ಅವರು, ಇಲ್ಲಿನ ಕಾವೇರಿ ಹಾಲ್‍ನಲ್ಲಿ ಆಯೋಜಿಸಲಿರುವ ಸತ್ಸಂಗದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಸಂಜೆ ಸತ್ಸಂಗದಲ್ಲಿ ಪಾಲ್ಗೊಳ್ಳಲಿರುವ ಗುರೂಜಿ ಅವರು, ಆ ನಂತರ ಭಕ್ತರೊಬ್ಬರ ಮನೆಯಲ್ಲಿ ತಂಗಲಿದ್ದಾರೆ. ತಾ. 27 ರಂದು ಬೆಳಿಗ್ಗೆ ಶ್ರೀ ತಲಕಾವೇರಿ-ಭಾಗಮಂಡಲ ಕ್ಷೇತ್ರಕ್ಕೆ ತೆರಳಿರುವ ಗುರೂಜಿ ಅಲ್ಲಿ ಆಗಮಿಕರಿಂದ ಜರುಗಲಿರುವ ರುದ್ರಪೂಜೆ ಹಾಗೂ ದೇವತಾ ಕೈಂಕರ್ಯಗಳಲ್ಲಿ ಭಾಗವಹಿಸುವರು. ಅಲ್ಲದೆ ಕಾವೇರಿ ಮಾತೆಗೆ ವಿಶೇಷ ಪ್ರಾರ್ಥನೆ, ಪೂಜೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಆರ್ಟ್ ಆಫ್ ಲಿವಿಂಗ್ ಬಳಗದ ಮೂಲಗಳು ತಿಳಿಸಿವೆ.