ಕೂಡಿಗೆ : ಕುಡಿಯುವ ನೀರಿಗೆ ಹಾಹಾಕಾರ ಬಂದಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹಾರಂಗಿ ಜಲಾಶಯದ ವಿದ್ಯುತ್ ಘಟಕದ ಮೂಲಕ ನದಿಗೆ 350 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮತ್ತು ನೀರಾವರಿ ಇಲಾಖೆಯ ಮೇಲಾಧಿಕಾರಿಗಳ ಆದೇಶದಂತೆ ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಉಪಯೋಗಕ್ಕೆ ಅನುಕೂಲವಾಗುವಂತೆ ನೀರನ್ನು ನದಿಗೆ ಹಾರಿಸಲಾಗುತ್ತಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಧರ್ಮರಾಜು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಹಾರಂಗಿಯಲ್ಲಿ ಜಲ ವಿದ್ಯುತ್ ಉತ್ಪಾದನೆ ಮತ್ತು ಆ ಮುಖಾಂತರ ಹೊಳೆಗೆ ನೀರು ಹರಿಯ ಬಿಡುತ್ತಿರುವದು ಸಂಶಯ ಮೂಡುವಂತಾಗಿದೆ. ಬೇಸಿಗೆ ಪ್ರಾರಂಬವಾದ ಹಿನ್ನಲ್ಲೇ ಪ್ರತೀ ವರ್ಷ ಕುಶಾಲನಗರ-ಮುಳ್ಳುಸೋಗೆ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ಜನ ಪರಿತಪಿಸುತ್ತಾರೆ. ಸ್ವಂತ ಕೊಳವೆ ಬಾವಿಗಳನ್ನು ಹೊಂದಿರುವವರು ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿ ನೀರನ್ನು ಬಳಸಿಕೊಳ್ಳುತ್ತಾರೆ.

ಹಾರಂಗಿಯಲ್ಲಿ ನದಿಗೆ ನೀರು

(ಮೊದಲ ಪುಟದಿಂದ) ನಗರ ನೀರು ಸರಬರಾಜು ಇಲಾಖೆ ಒದಗಿಸುವ ನೀರನ್ನೇ ನಿರೀಕ್ಷಿಸುತ್ತಾ ಬರುವ ಟ್ಯಾಂಕರ್‍ಗಳಿಗಾಗಿ ಎದುರು ನೋಡುತ್ತಾರೆ.

ಜಲಮಂಡಳಿ ಕಾವೇರಿ ನದಿ ಬತ್ತಿಹೋಗಿರುವದನ್ನೇ ನೆಪಮಾಡಿಕೊಂಡು ತಮ್ಮ ಕಚೇರಿ ಮತ್ತು ನಿರ್ವಹಣಾ ಘಟಕಗಳಿಗೆ ಬೀಗ ಜಡಿದಿದೆ. ಇಂತಹ ಸ್ಥಿತಿಯಲ್ಲಿ ನಗರದ ಬೈಪಾಸ್ ರಸ್ತೆಯಲ್ಲಿನ ಪೂರ್ಣಶ್ರೀ ವಸತಿ ಗೃಹ ಮತ್ತು ಫರ್ನಿಚರ್ ಮಾಲೀಕ ರವೀಂದ್ರ ರೈ ಸಾರ್ವಜನಿಕರಿಗಾಗಿ ಕುಡಿಯುವ ನೀರನ್ನು ಬಕೇಟ್ ಮತ್ತು ಬಿಂದಿಗೆಗಳಿಗೆ ತುಂಬಿಕೊಡಲು ಮುಂದಾಗಿದ್ದಾರೆ. ಈ ಪ್ರಯತ್ನ ಕುಶಾಲನಗರದಲ್ಲಿ ಸ್ವಂತ ಕೊಳವೆ ಬಾವಿಗಳನ್ನು ಹೊಂದಿರುವ ಬಹುತೇಕರಿಗೆ ಮಾದರಿಯಾದರೆ, ನೀರಿಗಾಗಿ ಪರಿತಪಿಸುತ್ತಿರುವ ಎಷ್ಟೋ ಜನರಿಗೆ ಸಹಾಯವಾಗುತ್ತದೆ.

ಮುಳ್ಳುಸೋಗೆಯ ಜನತಾ ಕಾಲೋನಿ, ಗುಮ್ಮನಕೊಲ್ಲಿ, ಗೋಪಾಲ್ ಸರ್ಕಲ್, ಶಕ್ತಿ ಬಡಾವಣೆ, ಮಾರುತಿ ಬಡಾವಣೆ, ಬೈಚನಹಳ್ಳಿ, ಇಂದಿರಾ ಬಡಾವಣೆ, ದಂಡಿನಪೇಟೆ, ಕಾಳಮ್ಮ ಕಾಲೋನಿ, ಟೌನ್ ಕಾಲೋನಿ, ಮುಂತಾದ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಬಡಾವಣೆಗಳಿಗೆ ಕೊಳವೆ ಬಾವಿಗಳ ಮಾಲೀಕರು ನೀರನ್ನು ದಯಪಾಲಿಸಿದರೆ ಒಳ್ಳೆಯದು.

ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು ಕೂಡ ನೀರಿನ ಅಭಾವ ಮನಗಂಡು ತಮ್ಮ ತಮ್ಮ ವಾರ್ಡುಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಸುಮಾರು 4 ಟ್ಯಾಂಕರ್ ನೀರನ್ನು ತುಂಬಿಸಿಕೊಂಡು ಗುಮ್ಮನಕೊಲ್ಲಿ ಬಸವೇಶ್ವರ ಬಡಾವಣೆ, ಜನತಾಕಾಲೋನಿ, ವಿವೇಕಾನಂದ ಸರ್ಕಲ್ ಬಳಿಯ ಮನೆಗಳಿಗೆ 2 ದಿನಗಳಿಗೊಮ್ಮೆ ದಿನದ 15 ತಾಸು ಎಡೆಬಿಡದೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಿ ಸ್ವಲ್ಪಮಟ್ಟಿನ ನೀರಿನ ಅಭಾವ ತಗ್ಗಿಸಿದ್ದಾರೆ.