ಮಡಿಕೇರಿ, ಮಾ. 23: ಪ್ರಸಕ್ತ ಹೊಸ ವರ್ಷ ಯುಗಾದಿಯ ಬೆನ್ನಲ್ಲೇ ಕಾವೇರಿ ತವರು ಕೊಡಗಿನಲ್ಲಿ ಆಶಾದಾಯಕ ಮಳೆಯಾದ ಬೆನ್ನಲ್ಲೇ; ಬಿಸಿಲಿನ ತಾಪ ಹೆಚ್ಚಾಗುವದರೊಂದಿಗೆ ಅಲ್ಲಲ್ಲಿ ಕುಡಿಯುವ ನೀರಿಗೂ ಕಂಟಕ ಎದುರಾಗಿದೆ. ಕುಂಡಾಮೇಸ್ತ್ರಿ ಯೋಜನೆಯ ಫಲವಾಗಿ ಸ್ವಲ್ಪ ಮಟ್ಟಿಗೆ ಮಡಿಕೇರಿ ಜನತೆಗೆ ಕುಡಿಯುವ ನೀರಿನ ಅಭಾವದ ಬಿಸಿ ತಟ್ಟಿಲ್ಲವೆನ್ನಬಹುದು.ಬದಲಾಗಿ ಮಡಿಕೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳು; ನಾಪೋಕ್ಲು ವ್ಯಾಪ್ತಿಯ ನರಿಯಂದಡ, ಚೆಯ್ಯಂಡಾಣೆ, ಕಡಂಗ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೊರುವದರೊಂದಿಗೆ ಕೆಲವೆಡೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿರುವದಾಗಿ ಅಲ್ಲಿನ ನಿವಾಸಿಗಳು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಇನ್ನು ಜಿಲ್ಲೆಯ ಅನೇಕ ಗ್ರಾಮೀಣ ಭಾಗಗಳಲ್ಲಿ ನೈಸರ್ಗಿಕ ನೀರನ್ನು ಅವಲಂಭಿಸಿರುವ ಗ್ರಾಮ ನಿವಾಸಿಗಳು ಪ್ರಸಕ್ತ ಬಿಸಿಲಿನ ತಾಪದಿಂದ ಜಲಮೂಲ ಬತ್ತುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕೊಡಗಿನ ಬಾಳೆಲೆ, ದೇವನೂರು, ನಿಟ್ಟೂರು ಸುತ್ತಮುತ್ತ ದಿನನಿತ್ಯ ಬಳಕೆಗೆ ನೀರಿನ ಬವಣೆ ಎದುರಾಗಿದೆ ಎಂದು ಅಲ್ಲಿನ ನಿವಾಸಿಗಳು ಅಸಹಾಯಕತೆ ಹೊರಗೆಡವಿದ್ದಾರೆ.
ಮುಖ್ಯವಾಗಿ ದಕ್ಷಿಣ ಭಾರತದ ಜೀವನದಿ ಎಂಬ ಹೆಗ್ಗಳಿಕೆಯ ಕಾವೇರಿಯು; ತನ್ನ ತವರಿನಲ್ಲಿಯೇ ಬತ್ತುತ್ತಿರುವ ದೃಶ್ಯ ಎದುರಾಗಿದ್ದು,
(ಮೊದಲ ಪುಟದಿಂದ) ಹೊಳೆ ದಂಡೆ ಪ್ರದೇಶಗಳಲ್ಲಿ ಕೆಲವೆಡೆ ನೀರಿನ ಸಮಸ್ಯೆಯು ಕಾಡುವಂತಾಗಿದೆ. ಕುಶಾಲನಗರ ಸುತ್ತಮುತ್ತಲಿನ ಕೆಲವೆಡೆ ನೀರಿಗಾಗಿ ಕೆಲವು ವಸತಿ ಪ್ರದೇಶ ನಿವಾಸಿಗಳಲ್ಲಿ ಕಿತ್ತಾಟ ತಲೆದೋರಿದೆ.
ಜಿಲ್ಲೆಯ ಗಡಿ ಗ್ರಾಮಗಳಾದ ಕೊಡ್ಲಿಪೇಟೆ, ಶಿರಂಗಾಲ, ಶನಿವಾರಸಂತೆ, ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಜನತೆಗೆ ಕೆಲವು ಕಡೆ ಕೊಳವೆ ಬಾವಿ ನೀರು ಕ್ಷೀಣಗೊಂಡು ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅತ್ತ ಪೆರಾಜೆ, ಚೆಂಬು ಸುತ್ತಮುತ್ತ ನೀರಿನ ಅಭಾವ ತಲೆದೋರಿದ್ದು, ಸಾಧ್ಯವಿರುವಷ್ಟು ತೊಂದರೆ ನೀಗಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಿವೆ ಎಂದು ಮಾಹಿತಿ ಲಭಿಸಿದೆ. ಜಿಲ್ಲೆಯ ಅಲ್ಲಲ್ಲಿ ಸಣ್ಣಪುಟ್ಟ ಹಳ್ಳಕೊಳ್ಳಗಳ ನೀರು ಬಿಸಿಲಿನ ತಾಪದಿಂದ ಬತ್ತುತ್ತಿರುವ ಪರಿಣಾಮ ಗ್ರಾಮಸ್ಥರೊಂದಿಗೆ, ಜಾನುವಾರು, ಇತರ ಪ್ರಾಣಿ, ಪಕ್ಷಿಗಳಿಗೂ ತೊಂದರೆ ಎದುರಾಗುತ್ತಿರುವ ದೃಶ್ಯ ಗೋಚರಿಸಿದೆ.
ಕೃಷಿ ಭೂಮಿ, ಗದ್ದೆ ನಾಟಿ ಪ್ರದೇಶಗಳಲ್ಲಿ ಮಾತ್ರ ನಿತ್ಯ ಜಲಮೂಲಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಇದೆಯಾದರೂ, ಕೆಲವೆಡೆ ನೀರಿನ ಬವಣೆಯಿಂದ ತರಕಾರಿ ಇತ್ಯಾದಿ ರೈತರು ಬೆಳೆದಿರುವ ಫಸಲು ಒಣಗುವಂತಾಗಿದೆ. ಯುಗಾದಿಯ ದಿನಗಳಲ್ಲಿ ಮಳೆಯಾದ ಬೆನ್ನಲ್ಲೇ ಬಿಸಿಲಿನ ತಾಪ ತೀವ್ರಗೊಂಡಿದ್ದು, ಸಹಜವಾಗಿಯೇ ಕೃಷಿ ಫಸಲು ಬಾಡಿ ಹೋಗುವದರೊಂದಿಗೆ ಒಣಗುತ್ತಿರುವ ಆತಂಕ ಎದುರಾಗಿದೆ.
ಕುಶಾಲನಗರ: ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ನೀರು ಸರಬರಾಜು ಮಾಡಲು ಸ್ಥಳೀಯ ಪಟ್ಟಣ ಪಂಚಾಯ್ತಿ ಮತ್ತು ಜಲಮಂಡಳಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಲುಗಡೆಯಾಗಿದ್ದು ಪಟ್ಟಣಕ್ಕೆ ಕಳೆದ ಎರಡು ವಾರಗಳಿಂದ ನೀರಿನ ಪೂರೈಕೆ ಮಾಡಲು ಜಲಮಂಡಳಿ ಹರಸಾಹಸ ಪಡುತ್ತಿದೆ.
ಕುಶಾಲನಗರ ಪಟ್ಟಣಕ್ಕೆ ಕಿರು ನೀರು ಸರಬರಾಜು ಯೋಜನೆ ಹಾಗೂ ಸ್ಥಳೀಯ ಕೊಳವೆ ಬಾವಿಗಳ ಮೂಲಕ ನೀರು ಸಂಗ್ರಹಿಸಿ ಟ್ಯಾಂಕರ್ನಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.
ಗುಡ್ಡೆಹೊಸೂರು ಸಮೀಪ ಕಾವೇರಿ ನದಿಯಲ್ಲಿರುವ ಕಲ್ಲುಬಂಡೆಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಚಿಕ್ಲಿಹೊಳೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕಾವೇರಿ ನದಿಗೆ ಹರಿಸಿ ಆ ಮೂಲಕ ಪಂಪ್ಹೌಸ್ನಿಂದ ನೀರು ಹರಿಸಲು ಜಲಮಂಡಳಿ ಅಧಿಕಾರಿ ಆನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಈ ನಡುವೆ ಸ್ಥಳೀಯ ಉದ್ಯಮಿಗಳು, ಸಂಘಸಂಸ್ಥೆಗಳು ಪಟ್ಟಣದ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರು ಒದಗಿಸಲು ಕೈಜೋಡಿಸಿವೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವಿವಿಧೆಡೆ ಕಳೆದ ಎರಡು ದಿನಗಳಿಂದ ಮಳೆಯಾಗಿದ್ದು, ಆ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಹಾಯಿಸುತ್ತಿದ್ದ ಮೋಟಾರ್ ಪಂಪ್ಗಳು ಸ್ಥಗಿತಗೊಂಡ ಬೆನ್ನಲ್ಲೇ ಕಾವೇರಿ ನದಿಯಲ್ಲಿ 3 ಅಡಿಗಳಷ್ಟು ನೀರು ಹರಿಯಲು ಪ್ರಾರಂಭಗೊಂಡಿದೆ.
ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಸಿದ್ದಾಪುರ ವ್ಯಾಪ್ತಿಯಲ್ಲಿ ಮಳೆ ಸುರಿದಿದ್ದು, ಈ ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿದ್ದ ನೀರು ಇದೀಗ ನದಿಯಲ್ಲಿ ಹರಿಯಲಾರಂಭಿಸಿದೆ. ಶುಕ್ರವಾರ ಸಂಜೆ ವೇಳೆಗೆ ನಂಜರಾಯಪಟ್ಟಣ, ರಂಗಸಮುದ್ರ ವ್ಯಾಪ್ತಿಯ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಕಂಡುಬಂದಿದೆ ಎಂದು ಅಲ್ಲಿನ ಕಾಫಿ ಬೆಳೆಗಾರ ಸಿ.ಎಸ್. ಪೂವಯ್ಯ ಮಾಹಿತಿ ನೀಡಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ನೀರಿನ ಹರಿವು ಗೋಚರಿಸುವದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ನೀಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಖಾಸಗಿ ಕುಡಿಯುವ ನೀರು ಸರಬರಾಜು ಕೇಂದ್ರಗಳಲ್ಲಿ ನೀರಿಗೆ ಬೇಡಿಕೆ ಹೆಚ್ಚಳಗೊಂಡಿದೆ. 1000 ಲೀಟರ್ ನೀರಿನ ಬೇಡಿಕೆ ಇದೀಗ ನಿತ್ಯ 15 ಸಾವಿರ ಲೀಟರ್ಗೂ ಅಧಿಕ ಪ್ರಮಾಣದ ನೀರು ಮಾರಾಟ ವಾಗುತ್ತಿದೆ ಎಂದು ಶುದ್ಧ ಕುಡಿಯುವ ನೀರಿನ ಘಟಕದ ಮೂಲಗಳು ತಿಳಿಸಿವೆ.
ಕೊನೆಯದಾಗಿ...
ಕಾವೇರಿ ಹರಿಯುವ ಊರಲ್ಲಿ ಇಂತಹ ಸ್ಥಿತಿ ಯಾರಾದರೂ ಊಹಿಸಿದ್ದರಾ...??!!. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಆ ಮನೆಯಲ್ಲಿ ಎರಡು ಬಿಂದಿಗೆ ನೀರು ಕಳವು... ಆರೋಪಿ ಬಂಧನಕ್ಕೆ ಹುಡುಕಾಟ.... ಎಂಬಂತಹ ವರ್ತಮಾನಗಳನ್ನು ಕೇಳಬಹುದೋ ಏನೋ....