ಮಡಿಕೇರಿ, ಮಾ. 23: ಐದು ದಶಕದ ಹಿಂದೆ ನಗರದಲ್ಲಿ ವ್ಯಾಪಾರ ನಡೆಸುತ್ತಿದ್ದ ಪಾರ್ಷಿ ಜನಾಂಗದ ವ್ಯಕ್ತಿಯೊಬ್ಬರು, ತನ್ನ ಒಡೆತನದಲ್ಲಿದ್ದ ಕಟ್ಟಡ ಸೇರಿದಂತೆ ಬ್ಯಾಂಕ್ ಖಾತೆಯಲ್ಲಿರುವ ಹಣ ಇತ್ಯಾದಿಯನ್ನು ಕಾನೂನಿನ ಅಡಿಯಲ್ಲಿ ದೇವರಿಗೆ ದಾನ ಪತ್ರ ನೀಡಿದ್ದು, ಇದುವರೆಗೂ ಸಂಬಂಧಪಟ್ಟವರು ಸದುಪಯೋಗ ಮಾಡಿಕೊಳ್ಳದಿರುವದು ಗೋಚರಿಸಿದೆ.ಆ ಪ್ರಕಾರ ಮಹದೇವಪೇಟೆಯಲ್ಲಿ ದಶಕಗಳ ಹಿಂದೆ ನೆಲೆಸಿದ್ದ, ದೋರಾಬ್‍ಜೀ ದಾರಾಶ ಎಂಬವರು 1969ನೇ ಇಸವಿ ಅಕ್ಟೋಬರ್ 24 ರಂದು ಅಂದಿನ ಕೊಡಗು ಜಿಲ್ಲಾ ನ್ಯಾಯಾಧೀಶರ ಸಕ್ಷಮ ಪ್ರಮಾಣೀಕರಿಸಿ ಮರಣ ಪತ್ರ ನೀಡಿರುವದಾಗಿದೆ. ಈ ವ್ಯಾಪಾರಿಯ ಪ್ರಕಾರ ತನ್ನ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿ ಜಿಲ್ಲೆಯ ಪ್ರಮುಖ ದೇಗುಲಗಳಿಗೆ ಸೇರಲಿದೆ.ತನ್ನ ಬಳಿಕ ಸಂಬಂಧಿ ಮಹಿಳೆ ವಿೂಟಿಬಾಯಿ ಕೂಡ ಬಾಳಿ ಬದುಕಿ ನಿಧನ ಹೊಂದಿದ ತರುವಾಯ, ಮಹದೇವಪೇಟೆಯ ಚೌಕ್ ಬಳಿ ಇರುವ ಸರ್ವೆ ನಂ. 2ರ ಬ್ಲಾಕ್ ನಂಬರ್ ನಂ. 11 ರಲ್ಲಿ ಜವಳಿ ಅಂಗಡಿ ಇತ್ಯಾದಿ ಸೇರಿದಂತೆ ಬ್ಲಾಕ್ ನಂ. 4 ರ ಸರ್ವೆ ನಂ. 58 ರಲ್ಲಿರುವ ಮಹಡಿ ಮನೆ ಇತ್ಯಾದಿಯನ್ನು ಶುದ್ಧ ಕ್ರಯಕ್ಕೆ ಮಾರಾಟ ಅಥವಾ ಹರಾಜುಗೊಳಿಸಬೇಕಿದೆ.
ಆ ಮುಖಾಂತರ ಒಟ್ಟಾರೆ ಆಸ್ತಿಯಿಂದ ಲಭಿಸುವ ಹಣವನ್ನು ಮುಖ್ಯವಾಗಿ ಕೊಡಗಿನ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಶೇ. 50 ರಷ್ಟು ವಿನಿಯೋಗಿಸಿ ಕೊಳ್ಳಬೇಕಿದೆ. ಉಳಿದಂತೆ ಶೇ. 50 ರಷ್ಟು ಹಣವನ್ನು, ಕೊಡಗಿನ ಆದಿದೈವ ಎಂಬ ಹೆಗ್ಗಳಿಕೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಗೆ ಮತ್ತು ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ತಲಾ ಶೇ. 25 ರಂತೆ ಪಾಲು ನೀಡಬೇಕಿದೆ.
ಈ ರೀತಿ ತನ್ನ ಆಸ್ತಿಯನ್ನು ದೇವರಿಗೆ ಮರಣ ಪತ್ರದಲ್ಲಿ ನಮೂದಿಸಿರುವ ದೋರಾಬ್‍ಜೀ ದಾರಾಶ ಅವರು, ಮರಣ ಪತ್ರದಲ್ಲಿರುವ ಅಂಶವನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ಧಾರ್ಮಿಕ ದತ್ತಿ ಇಲಾಖೆ ಅಥವಾ ಆಯಾ ದೇವಾಲಯ ಸಮಿತಿಗಳಿಗೆ ಅಧಿಕಾರ ಇರತಕ್ಕದೆಂದು ಸ್ವಂತ ಬುದ್ಧಿಯಿಂದಲೂ ಸಂಪೂರ್ಣ ಜ್ಞಾನವಂತಿಕೆಯಿಂದಲೂ ತಾನು ಬರೆದಿರುವದಾಗಿ ಘೋಷಿಸಿದ್ದಾರೆ.
ಸಂಬಂಧಿಸಿದ ಮರಣ ಪತ್ರದ ಸಾರಾಂಶ ಪ್ರಕಾರ ದೋರಾಬ್‍ಜೀ ದಾರಾಶ ಕಾಲವಾಗಿ ದಶಕಗಳೇ ಕಳೆದಿದ್ದು, ಅವರು ಪತ್ರದಲ್ಲಿ ಉಲ್ಲೇಖಿಸಿರುವ ವಿೂಟಿಬಾಯಿ ಕೂಡ ನಿಧನರಾಗಿ ಎಂಟು ವರ್ಷಗಳು ಕಳೆದು ಹೋಗಿವೆ. ಹೀಗಿದ್ದರೂ ಪಾರ್ಷಿ ಕುಟುಂಬವೊಂದು
(ಮೊದಲ ಪುಟದಿಂದ) ಕೊಡಗಿನ ಕುಲಮಾತೆ ಶ್ರೀ ಕಾವೇರಿ ಉಗಮ ಸ್ಥಳ ಹಾಗೂ ಸಂಗಮ ಕ್ಷೇತ್ರ ಭಾಗಮಂಡಲದೊಂದಿಗೆ, ಪಾಡಿ ಶ್ರೀ ಇಗ್ಗುತ್ತಪ್ಪ ಮತ್ತು ಶ್ರೀ ಓಂಕಾರೇಶ್ವರ ಸನ್ನಿಧಿಗಳಿಗೆ ಭಕ್ತಿಯ ಪ್ರತೀಕವಾಗಿ ಸಲ್ಲಿಸಿರುವ ದಾನಪತ್ರವನ್ನು ಕಾರ್ಯಗತಗೊಳಿಸಲು ಕಾಲ ಕೂಡಿ ಬಂದಿಲ್ಲವಷ್ಟೇ.
ಪ್ರಸಕ್ತ ನೂತನವಾಗಿ ತಲಕಾವೇರಿ - ಭಾಗಮಂಡಲ ಕ್ಷೇತ್ರ ಸೇರಿದಂತೆ ಜಿಲ್ಲೆಯ ಮೂರು ಪ್ರಮುಖ ಸನ್ನಿಧಿಗಳಿಗೆ ಸರಕಾರದಿಂದ ನೂತನ ವ್ಯವಸ್ಥಾಪನಾ ಸಮಿತಿಗಳು ರಚನೆಗೊಂಡಿದ್ದು, ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ. ಆ ಮುಖಾಂತರ ದಾನಿಗಳ ಆಶಯ ನೆರವೇರಿಸಬೇಕಿದೆ.
ಈ ಬಗ್ಗೆ ತಲಕಾವೇರಿ - ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸುತ್ತಾ, ಸಂಬಂಧಪಟ್ಟ ಮರಣ ಪತ್ರ ಹಾಗೂ ದಾನದ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿರುವದಾಗಿ ತಿಳಿಸಿದ್ದಾರೆ.
ಅಲ್ಲದೆ ಪಾಡಿ ಮತ್ತು ಓಂಕಾರೇಶ್ವರ ದೇಗುಲ ಸಮಿತಿ ಪ್ರಮುಖರೊಂದಿಗೆ ಆದಷ್ಟು ಬೇಗ ಮಾತುಕತೆ ನಡೆಸಿ ದೇವಾಲಯಗಳಿಗೆ ಸಲ್ಲಬೇಕಾದ ದಾನಪತ್ರ ಕೊಡುಗೆಯನ್ನು ಕಾರ್ಯಗತಗೊಳಿಸಲು ಕ್ರಮ ವಹಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.