ಮಡಿಕೇರಿ, ಮಾ.23 : ಡಾ.ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಗಾಗಿ ಕೆಲವು ಪರಿಸರವಾದಿಗಳು ಕೇಂದ್ರ ಸರ್ಕಾರದ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆÀಂದು ಆರೋಪಿಸಿರುವ ಬಿರುನಾಣಿ ಗ್ರಾಮಸ್ಥರು, ವರದಿ ಜಾರಿಗೆ ಮುಂದಾದಲ್ಲಿ ತೀವ್ರ ರೀತಿಯ ಹೋರಾಟ ಎದುರಿಸಬೇಕಾಗುತ್ತ ದೆಂದು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಕೆ. ನಾಣಯ್ಯ, ಯಾವದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ನೀಡುವದಿಲ್ಲವೆಂದರು. ಹಾಗೊಂದು ವೇಳೆ ವರದಿ ಜಾರಿಯಾದದ್ದೇ ಆದಲ್ಲಿ, ಕೊಡಗು ಪಂಜಾಬ್ ಆಗಲಿದೆಯೆಂದು ಎಚ್ಚರಿಕೆ ನೀಡಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿರುವ ಕೊಡಗಿನ ವೀರರು ಕಾವೇರಿ ನಾಡನ್ನು ಉಳಿಸಿಕೊಳ್ಳಲು ಕೂಡ ಪ್ರಾಣ ಬಿಡಲು ಸಿದ್ಧವಿರುವದಾಗಿ ಎಚ್ಚರಿಕೆ ನೀಡಿದರು.

ಬಿರುನಾಣಿ ಬೆಳೆÉಗಾರರ ಸಂಘದ ಅಧ್ಯಕ್ಷ ಬಿ.ಕೆ. ಪೊನ್ನಪ್ಪ ಮಾತನಾಡಿ, ಕೇಂದ್ರ ಪರಿಸರ ಖಾತೆ ಸಚಿವರ ಬಳಿ ಪರಿಸರ ವಾದಿಗಳು ಸುಳ್ಳು ಹೇಳಿ ಡಾ. ಕಸ್ತೂರಿ ರಂಗನ್ ವರದಿ ಜಾರಿಗೆ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು. ವರದಿಯನ್ನು ಬೇಕಿದ್ದಲ್ಲಿ ಅರಣ್ಯ ಪ್ರದೇಶದಲ್ಲಿ ಜಾರಿಗೊಳಿಸಿಕೊಳ್ಳಲಿ ಎಂದು ಹೇಳಿದ ಅವರು, ಕುಶಾಲನಗರದವರೆಗೆ ರೈಲು ಮಾರ್ಗ ಹಾಗೂ ಪ್ರವಾಸೋದ್ಯಮದ ಬೆಳವಣಿಗೆಗಾಗಿ ಹೆದ್ದಾರಿ ಯೋಜನೆ ಜಾರಿಯಾಗಬೇಕೆಂದು ಆಗ್ರಹಿಸಿದರು.

ಕಾಫಿ ಮಂಡಳಿ ಸದಸ್ಯ ಬಿ.ಎಂ.ರಾಜು ಮಾತನಾಡಿ, ಪರಿಸರವಾದಿಗಳು ವರದಿಯ ಯಥಾವತ್ ಜಾರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವದಾಗಿ ತಿಳಿದು ಬಂದಿದೆ. ಅಲ್ಲದೆ, ಕೊಡಗಿನ ಎಲ್ಲಾ ಜನತೆ ವರದಿಯ ಜಾರಿಗೆ ಉತ್ಸುಕರಾಗಿದ್ದಾರೆ ಎಂದು ಕೇಂದ್ರದ ಬಳಿ ಪ್ರತಿಬಿಂಬಿಸಲಾಗಿದೆಯೆಂದು ಆರೋಪಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಗಿರೀಶ್ ಪೆಮ್ಮಯ್ಯ ಮಾತನಾಡಿ, ಎ.ಸಿ. ಕಾರಿನಲ್ಲಿ ಕುಳಿತು ಕೊಡಗಿನ ಜನರಿಗೆ ಪರಿಸರವಾದಿಗಳು ಪರಿಸರ ಸಂರಕ್ಷಣೆಯ ಬಗ್ಗೆ ಪಾಠ ಹೇಳುವ ಅಗತ್ಯವಿಲ್ಲವೆಂದರು. ಮೂಲ ನಿವಾಸಿಗಳ ಭಾವನೆಯನ್ನು ಕೆಣಕಿ ವರದಿ ಜಾರಿಗೆ ಮುಂದಾದರೆ, ಧಂಗೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು. ಕೊಡಗಿನಲ್ಲಿ ಅರಣ್ಯ ಪ್ರದೇಶ ನಾಶವಾಗಿದೆ ಮತ್ತು ಕಾವೇರಿ ನದಿ ಬರಡಾಗಿದೆಯೆಂದು ಅಪ ಪ್ರಚಾರ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಪರಿಸರ ವಾದಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿರುನಾಣಿ ಕೊಡವ ಸಮಾಜದ ಅಧ್ಯಕ್ಷ ಎಂ.ಎಂ. ಪೆಮ್ಮಯ್ಯ ಮಾತನಾಡಿ, ರೈಲು ಮಾರ್ಗ ಮತ್ತು ಹೆದ್ದಾರಿಯ ಅವಶ್ಯಕತೆಯ ಬಗ್ಗೆ ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ತೆರಾಲು ಗ್ರಾಮದ ಬೆಳೆಗಾರ ಎಂ.ಎಂ. ಭೀಮಯ್ಯ ಉಪಸ್ಥಿತರಿದ್ದರು.