ಸಿದ್ದಾಪುರ, ಮಾ. 23: ಜೀವ ನದಿ ಕಾವೇರಿ ಬತ್ತುತ್ತಿರಲು ಕೊಡಗಿನ ಪರಿಸರ ನಾಶವೇ ಪ್ರಮುಖ ಕಾರಣ ಎಂದು ನೆಲ್ಯಹುದಿಕೇರಿ ದಾರುಸ್ಸಲಾಂ ಸದರ್ ಮುಅಲ್ಲಿಂ ತಂಲೀಖ್ ದಾರಿಮಿ ಅಭಿಪ್ರಾಯಿಸಿದರು. ನೆಲ್ಯಹುದಿಕೇರಿ ದಾರುಸ್ಸಲಾಂ ಮದ್ರಸ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ತಾಪಮಾನ ಏರಿಕೆಯಾಗಲು ಪರಿಸರ ನಾಶ ಮತ್ತು ಜಲ ಸಂಪನ್ಮೂಲಗಳ ಅಮಿತ ಬಳಕೆ ಮತ್ತೊಂದು ಕಾರಣವಾಗಿದೆ. ಜಿಲ್ಲೆಯಲ್ಲಿದ್ದಂತಹ ಅಪಾರ ಪ್ರಮಾಣದ ಮರ ಕಡಿದುರುಳಿಸ ಲಾಗಿದೆ. ಪರಿಣಾಮವಾಗಿ ಜಲ ಸಂಪನ್ಮೂಲದಲ್ಲಿ ಇಳಿಕೆ ಕಾಣುವಂತಾಗಿದೆ ಎಂದರು. ನೀರಿನ ಮಿತ ಬಳಕೆ ಕಡ್ಡಾಯ ಎಂಬ ನಿಯಮ ಜಾರಿಯಾದರೆ ಮಾತ್ರ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಉಳಿಸಲು ಸಾದ್ಯ. ಪ್ರಪಂಚದ 16 ಕೋಟಿ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಕೊರತೆ ಈಗಾಗಲೇ ಉದ್ಭವಿಸಿದೆ. ಬಾಯಾರಿ ದವನಿಗೆ ನೀರುಣಿಸುವದಕ್ಕಿಂತ ಮಿಗಿಲಾದ ದಾನ ಮತ್ತೊಂದಿಲ್ಲ ಎಂಬ ಪ್ರವಾದಿ ವರ್ಯರ ಹೇಳಿಕೆಯಿಂದ ನಾವೆಲ್ಲರೂ ನೀರಿನ ಪ್ರಾಮುಖ್ಯತೆ ತಿಳಿಯ ಬೇಕಿದೆ ಎಂದರು.
ಪಾಲಿಬೆಟ್ಟ ಗ್ರಾಪಂ ಪಿಡಿಒ ಅಬ್ದುಲ್ಲ ಮಾತನಾಡಿ, ನೀರಿನ ಮರು ಬಳಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹತ್ತು ಸಾವಿರ ಕೋಟಿ ರೂಗಳ ಯೋಜನೆಯೊಂದನ್ನು ಪ್ರಾರಂಭಿಸಲಾಗಿದೆ. ಪ್ರಪಂಚದಲ್ಲಿರುವ ನೀರಿನ ಪ್ರಮಾಣ ಯಾವದೇ ಕಾರಣಕ್ಕೂ ಕಡಿಮೆ ಆಗುವದಿಲ್ಲ. ಆದರೆ ಮಾನವರ ದುರ್ಬಳಕೆಯಿಂದಾಗಿ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ ಎಂದು ವಿಷಾಧಿಸಿದರು.
ನೀರು ದೇವರ ವರ, ಅದನ್ನು ಮಿತವಾಗಿ ಬಳಸುತ್ತೇನೆ ಮತ್ತು ಇತರರಿಗೂ ಮಿತ ಬಳಕೆ ಮಾಡುವಂತೆ ತಿಳಿಸುತ್ತೇನೆ. ಅರಣ್ಯ ನಾಶದಿಂದ ನೀರಿನ ಕೊರತೆ ಎದುರಾಗಿರುವ ಈ ಸಂದರ್ಭದಲ್ಲಿ ಅರಣ್ಯ, ಪರಿಸರ ಮತ್ತು ನೀರನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ನೀರಿನ ಮಹತ್ವ ಅರಿತು ಅದರ ಸಂರಕ್ಷಣೆಗಾಗಿ ನಾನು ಪಣ ತೊಡುತ್ತೇನೆ ಎಂಬವದಾಗಿ ದಾರುಸ್ಸಲಾಂ ಮದ್ರಸ ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. ಈ ಸಂದರ್ಭ ಜಮಾಅತ್ ಅಧ್ಯಕ್ಷ ಒ.ಎಂ ಅಬ್ದುಲ್ಲ, ಎಸ್ಕೆಎಸ್ಬಿವಿ ರಾಜ್ಯ ಸಮಿತಿ ಸದಸ್ಯ ಫರ್ಹಾನ್, ಖತೀಬ್ ಹನೀಫ ಪೈಝಿ, ಗ್ರಾಪಂ ಸದಸ್ಯ ಮುಸ್ತಫ, ಸಹಚಾರಿ ರಿಲೀಫ್ ಸೆಲ್ ಜಿಲ್ಲಾ ಸಂಚಾಲಕ ಸರ್ಫದ್ದೀನ್, ಆಲಿ, ಸುಲೈಮಾನ್ ಹಾಜಿ ಮತ್ತು ಇತರರು ಇದ್ದರು.