ವೀರಾಜಪೇಟೆ, ಮಾ. 23-ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಜಿಲ್ಲಾ ಪಂಚಾಯಿತಿಯಿಂದ ಅನುದಾನದ ಬೇಡಿಕೆ ಇಟ್ಟಿದ್ದರೂ ಇದುವರೆಗೂ ಅನುದಾನ ಬಂದಿಲ್ಲ. ಅಭಿವೃದ್ಧಿ ಕಾರ್ಯಗಳು ಕುಂಠಿತ ಗೊಂಡಿರುವದಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವೀರಾಜಪೇಟೆ ಸಮೀಪದ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಬೊಮ್ಮಂಡ ಕುಟುಂಬಸ್ತರ ಐನ್ ಮನೆಗೆ ಶಾಸಕರ ವಿಶೇಷ ಅನುದಾನದಲ್ಲಿ ಡಾಂಬರೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದ ಶಾಸಕರು ಮಾತನಾಡಿ, ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಯ್ಯ ರಸ್ತೆಗೆ ರೂ. 5 ಲಕ್ಷ ಹಾಗೂ ಶ್ರೀನಿ ಸಾರ್ವಜನಿಕ ರಸ್ತೆಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದ್ದು ಉಳಿದಿರುವ ರಸ್ತೆ ಮುಂದಿನ ಅನುದಾನದಲ್ಲಿ ಅಭಿವೃದ್ಧಿ ಗೊಳಿಸಲಾಗುವದು ಎಂದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ವಿಜು ಸುಬ್ರಮಣಿ ಮಾತನಾಡಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಅನೇಕ ಕಾಮಗಾರಿಗಳು ಅನುದಾನದ ಕೊರತೆಯಿಂದ ಬಾಕಿ ಉಳಿದಿವೆ. ಬೇಸಿಗೆಯ ಕಾಲ ಕುಡಿಯುವ ನೀರಿನ ಸಮಸ್ಯೆ ಉಂಟಾಗುವದರಿಂದ ರಾಜ್ಯ ಸರಕಾರ ಜಿಲ್ಲಾ ಪಂಚಾಯಿತಿಗೆ ಹೆಚ್ಚು ಅನುದಾನ ಒದಗಿಸಿದಲ್ಲಿ ಮಾತ್ರ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಹಾಗೂ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಾಧ್ಯ ಎಂದರು.

ರಸ್ತೆ ಉದ್ಘಾಟನೆ ಸಂದರ್ಭ ಶಾಸಕರೊಂದಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೊಮ್ಮಂಡ ತಾಯಮ್ಮ ನಾಚಪ್ಪ , ಉಪಾಧ್ಯಕ್ಷ ಎಂ.ಹೆಚ್.ನಿತೀಶ್, ಸ್ಥಾನೀಯ ಸಮಿತಿಯ ಎನ್.ಎಸ್.ಪ್ರಶಾಂತ್, ಪಂಚಾಯಿತಿ ಸದಸ್ಯರಾದ ಶಾಂತ, ಸಿ.ಎಂ.ನಾಚಪ್ಪ, ಲೀಲಾ, ಗ್ರಾಮಸ್ಥರಾದ ಟೋನಿ ರೊಜಾರಿಯೊ, ಎನ್.ಎಸ್.ಪ್ರಜೀದ್, ಎನ್.ಸಾಗರ್ ಮಾಚಯ್ಯ ಮುಂತಾದವರು ಉಪಸ್ಥಿತರಿದ್ದರು.

ನಿಟ್ಟೂರು

ಗೋಣಿಕೊಪ್ಪಲು : ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ರಮಾಡು ರಸ್ತೆಗೆ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ಯಡಿಯಲ್ಲಿ 16 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟನೆಗೊಳಿಸಲಾಯಿತು.

ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಮಾತನಾಡಿ, ಕಳೆದ ಹಲವು ದಶಕಗಳಿಂದ ಇಲ್ಲಿನ ರಸ್ತೆ ಹದಗೆಟ್ಟು ಸಂಚಾರ ದುಸ್ಥರವಾಗಿತ್ತು. ಸಮೀಪದಲ್ಲಿರುವ ಗಿರಿಜನ ಹಾಡಿ ಮಂದಿ ಕೂಡ ಇದರಿಂದ ಸಮಸ್ಯೆ ಅನುಭವಿಸುತ್ತಿದ್ದರು. ತುರ್ತು ಸಮಯದಲ್ಲಿ ತೆರಳಬೇಕಾದರೆ ಸಮಸ್ಯೆ ಎದುರಾಗುತ್ತಿದ್ದು. ಅದರಿಂದ ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ರಸ್ತೆ ನಿರ್ಮಾಣಗೊಳಿಸಿದ್ದು, ಕೊಡಗಿನ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಒತ್ತು ನೀಡಿ ಇದನ್ನು ಸ್ಥಳೀಯರು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭ ಉಸ್ತುವಾರಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಜಿ.ಪಂ ಸದಸ್ಯ ಪೃಥ್ಯು, ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚೋಂದಮ್ಮ, ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ಪವನ್ ಚಿಟ್ಟಿಯ್ಯಪ್ಪ, ತಾ.ಪಂ ಸದಸ್ಯೆ ಸುನೀತಾ, ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಂಪನ್ ಸೋಮಣ್ಣ ಸೇರಿದಂತೆ ಸ್ಥಳೀಯ ನಿವಾಸಿಗಳು, ಗ್ರಾ.ಪಂ ಸದಸ್ಯರುಗಳು ಪಾಲ್ಗೊಂಡಿದ್ದರು.

ಟಿ.ಶೆಟ್ಟಿಗೇರಿ

ಶ್ರೀಮಂಗಲ : ಟಿ.ಶೆಟ್ಟಿಗೇರಿ ಮತ್ತು ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಗಳನ್ನು ಜಿ.ಪಂ ಸದಸ್ಯ ಮುಕ್ಕಾಟೀರ ಶಿವು ಮಾದಪ್ಪ ಹಾಗೂ ಉಸ್ತುವಾರಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಉದ್ಘಾಟಿಸಿದರು.

ವೆಸ್ಟ್ ನೆಮ್ಮಲೆ ಗ್ರಾಮದಿಂದ ಬಿರುಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಶ್ರೀ ಪಾಲುಪರೆ ಚಾಮುಂಡಿ ದೇವಸ್ಥಾನ ರಸ್ತೆಯ 380 ಮೀ. ಕಾಮಗಾರಿಗೆ ರೂ. 20 ಲಕ್ಷ (ಎಸ್‍ಸಿಟಿಪಿ) ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ವೆಸ್ಟ್ ನೆಮ್ಮಲೆ ಗ್ರಾಮದ ಆನೆಕಪ್ಪ ರಸ್ತೆಗೆ ರೂ. 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಟಿ.ಶೆಟ್ಟಿಗೇರಿ ಗ್ರಾ.ಪಂ ಸದಸ್ಯ ಚೊಟ್ಟೆಯಂಡಮಾಡ ಉದಯ, ಯುವ ಕಾಂಗ್ರೇಸ್ ಅಧ್ಯಕ್ಷ ಮಾಣೀರ ಮಂಜು, ಹಿರಿಯರಾದ ಲವಕುಶಾಲಪ್ಪ, ಅಜ್ಜಮಾಡ ವೇಣು ಸುಬ್ಬಯ್ಯ, ಬಾದುಮಂಡ ರಮೇಶ್, ಚೆಟ್ಟಂಗಡ ಸತ್ಯ, ಟಿ.ಶೆಟ್ಟಿಗೇರಿ ಗ್ರಾ.ಪಂ ಮಾಜಿ ಅಧ್ಯಕ್ಷ ಪೆಮ್ಮಂಡ ರಾಜ, ಕಾಳಿಮಾಡ ಪ್ರಶಾಂತ್, ಅಜ್ಜಮಾಡ ಬೋಪಣ್ಣ, ಚೋವಂಡ ಸಂಜು, ಚೊಟ್ಟೆಯಂಡಮಾಡ ಮಂಜು ಮುಂತಾದವರು ಹಾಜರಿದ್ದರು.

ಡಾಂಬರೀಕರಣಕ್ಕೆ ಚಾಲನೆ

*ಗೋಣಿಕೊಪ್ಪಲು: ಶಾಸಕರ ವಿಶೇಷ ಅನುದಾನ ಮತ್ತು ಜಿ.ಪಂ. ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಅನುದಾನದ 14 ಲಕ್ಷ ವೆಚ್ಚದಲ್ಲಿ ಬಿಳುಗುಂದ ಗ್ರಾ.ಪಂ. ವ್ಯಾಪ್ತಿಯ ಕಾರ್ಮಾಡು, ಹೊಸಕೋಟೆ, ಕಳತ್ಮಾಡು, ಬೈಗೋಡು ಸಂಪರ್ಕ ರಸ್ತೆ ಕಾಮಗಾರಿಗೆ ಜಿ.ಪಂ. ಅಧ್ಯಕ್ಷ ಹರೀಶ್ ಭೂಮಿ ಪೂಜೆ ನೆರವೇರಿಸಿದರು.

ಮುಂಡೋಣಿ ರಸ್ತೆಯ 7 ಕಿಮೀ ರಸ್ತೆಯ ಡಾಂಬರೀಕರನ ಕಾಮಗಾರಿ ನಡೆಯಲಿದೆ. ಈ ಸಂದರ್ಭ ಜಿ.ಪಂ. ಅಧ್ಯಕ್ಷ ಹರೀಶ್ ಮಾತನಾಡಿ ರಸ್ತೆ ಕಾಮಗಾರಿಗೆ 5 ಲಕ್ಷ ಬಿಡುಗಡೆಯಾಗಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಅಧ್ಯಕ್ಷರ ಅನುದಾನದಿಂದ 3 ಲಕ್ಷ, ಸ್ಥಳೀಯ ಜಿ.ಪಂ. ಸದಸ್ಯರುಗಳಾದ ಮೂಕೊಂಡ ವಿಜು ಸುಬ್ರಮಣಿ, ಶಶಿ ಸುಬ್ರಮಣಿ ತಲಾ ಮೂರು ಲಕ್ಷದಂತೆ ಒಟ್ಟು 9 ಲಕ್ಷ ಅನುದಾನ ನೀಡುವದಾಗಿ ತಿಳಿಸಿದರು.

ರಾಜ್ಯ ಬಿ.ಜೆ.ಪಿ ಕಾರ್ಯದರ್ಶಿ ಆಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿದರು.

ಈ ಸಂದರ್ಭ ಬಿಳುಗುಂದ ಗ್ರಾ.ಪಂ. ಸದಸ್ಯ ಪ್ರತಾಪ್, ತಾಲೂಕು ಮಂಡಲ ಉಪಾಧ್ಯಕ್ಷ ಸೋಮೆಯಂಡ ಕಾವೇರಿ ಮಂದಣ್ಣ, ಆರ್.ಎಂ.ಸಿ. ಅಧ್ಯಕ್ಷ ಸುವಿನ್ ಗಣಪತಿ, ಆರ್.ಎಂ.ಸಿ. ಮಾಜಿ ಅಧ್ಯಕ್ಷ ಬೋಸ್ ದೇವಯ್ಯ, ಜಿಲ್ಲಾ ಬಿ.ಜೆ.ಪಿ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಜಿಲ್ಲಾ ಯುವ ಮೂರ್ಚಾ ಅಧ್ಯಕ್ಷ ಕಾಳನ ರವಿ ಹಾಗೂ ಗ್ರಾಮಸ್ಥರು ಹಾಜರಿದ್ದರು.