ಮಡಿಕೇರಿ, ಮಾ. 23: ಕೊಡವರಿಗೆ ಕೊಡವ ಲ್ಯಾಂಡ್ ಸ್ವಾಯತ್ತತೆ ಮತ್ತು ಕೊಡವ ಬುಡಕಟ್ಟು ಕುಲಕ್ಕೆ ಬೇಡಿಕೆ ಸಲ್ಲಿಸಲಾಗಿದೆಯೇ ಹೊರತು, ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕಲ್ಲ ಎಂದು ಕೊಡವವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ಎನ್.ಯು. ನಾಚಪ್ಪ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರಕಾರ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ ನಂತರ ಇದೀಗ ಕೊಡವರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಧ್ಯಮಗಳ ಹೇಳಿಕೆಗೆ ಅವರು ಸ್ಪಷ್ಟನೆ ನೀಡಿದ್ದು, ಯಾರೋ ಕಿಡಿಗೇಡಿಗಳು ತಮ್ಮ ಭಾವಚಿತ್ರ ಹಾಗೂ ವೀಡಿಯೋಗಳನ್ನು ಬಳಸಿಕೊಂಡು ವಾಹಿನಿಗಳಿಗೆ ನೀಡಿದ್ದಾರೆ ಎಂದಿದ್ದಾರೆ.

ಕೊಡವರು ಎಂದಿಗೂ ಸನಾತನ ಹಿಂದೂ ಧರ್ಮದ ಭಾಗವಾಗಿಯೇ ಮುಂದುವರಿಯಲಿದ್ದು, ಪಂಚಭೂತ ಆರಾಧನೆ ಕೂಡಾ ಹಿಂದೂ ಸಂಪ್ರದಾಯವೇ ಆಗಿರುವದರಿಂದ ಪ್ರತ್ಯೇಕ ಧರ್ಮೀಯರಾಗಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿರುವ ನಾಚಪ್ಪ, ಕೊಡವರಲ್ಲಿ ಬೇರೆ ಯಾರೂ ಪ್ರತ್ಯೇಕ ಧರ್ಮಕ್ಕೆ ಹೋರಾಡಿದರೂ ಸಿಎನ್‍ಸಿಯ ಪಾತ್ರ ಇರುವದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.