ಸೋಮವಾರಪೇಟೆ, ಮಾ.23 : ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಇದೇ ಮೊದಲ ಬಾರಿಗೆ ರೇಡಿಯಾಲಜಿಸ್ಟ್ ವೈದ್ಯ ಡಾ|| ಶ್ರೀಧರ್ ಆಗಮಿಸುವ ಮೂಲಕ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏಕೈಕ ರೇಡಿಯಾಲಜಿಸ್ಟ್ ಆಗಿದ್ದಾರೆ.

ರಾಜ್ಯಾದ್ಯಂತ 38 ರೇಡಿಯಾಲಜಿಸ್ಟ್ ಹುದ್ದೆ ಮಂಜೂರಾಗಿದ್ದು ಇಂದಿಗೂ 35 ಹುದ್ದೆಗಳು ಖಾಲಿ ಉಳಿದಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಡಾ. ಶ್ರೀಧರ್ ಅವರು ಆಗಮಿಸುವ ಮೂಲಕ ಗರ್ಭಿಣಿಯರು, ಕಿಡ್ನಿ, ಹೊಟ್ಟೆಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್‍ಗಾಗಿ ಖಾಸಗಿ ಆಸ್ಪತ್ರೆ ಸೇರಿದಂತೆ ಹೊರ ಜಿಲ್ಲೆಗಳಿಗೆ ತೆರಳುವ ತೊಂದರೆ ತಪ್ಪಲಿದೆ.

ನೂತನ ವೈದ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನೂತನ ಸ್ಕ್ಯಾನಿಂಗ್ ಮಿಷನ್ ಅಳವಡಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.

ಹಾಲಿ ಇರುವ ಸ್ಕ್ಯಾನಿಂಗ್ ಯಂತ್ರ ಹಳೆಯದಾಗಿದ್ದು ಇದರಲ್ಲಿ ಸಮರ್ಪಕ ಫಲಿತಾಂಶ ಹಾಗೂ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ ಎಂಬ ವೈದ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣವೇ ಎನ್‍ಆರ್‍ಹೆಚ್‍ಎಂ ಯೋಜನೆಯಡಿ ನೂತನ ಸ್ಕ್ಯಾನಿಂಗ್ ಯಂತ್ರ ಅಳವಡಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು. ಈ ಸಂದರ್ಭ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ, ವೈದ್ಯರಾದ ಡಾ|| ಶರತ್ ಬಾಬು, ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ, ಪ್ರಮುಖರಾದ ಸೋಮೇಶ್, ಗಂಗಾಧರ್ ಸೇರಿದಂತೆ ಇತರರು ಹಾಜರಿದ್ದರು.