ಸೋಮವಾರಪೇಟೆ, ಮಾ. 22: ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಇಂದೋ ನಾಳೆಯೋ ಜಾರಿಯಾಗುವ ಹಂತದಲ್ಲಿದೆ. ನೀತಿ ಸಂಹಿತೆ ಜಾರಿಯಾದರೆ ಕೆಲಸ ಕಾರ್ಯಗಳಿಗೆ ಒಂದಿಷ್ಟು ಅಡೆತಡೆಗಳು ಎದುರಾಗಲಿವೆ. ಇಂತಹ ಸನ್ನಿವೇಶದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸುವದು. ಅಗತ್ಯ ಕಾಮಗಾರಿಗೆ ಅನುಮೋದನೆ, ಮುಂದಿನ ಒಂದೆರಡು ತಿಂಗಳುಗಳಿಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾದ ಸಾಮಾನ್ಯ ಸಭೆಗಳಲ್ಲಿ ಜನರಿಂದ ಆರಿಸಿ ಬಂದವರು ವರ್ತಿಸುವ ಪರಿ ನೋಡಿದರೆ ಬೀದಿಯ ದೊಂಬರಾಟವನ್ನೂ ನಾಚಿಸುತ್ತದೆ!ಇಂತಹ ದೊಂಬರಾಟದ ಸಭೆಗಳು ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆಡಳಿತ ಪಕ್ಷ ಮತ್ತು ವಿಪಕ್ಷದವರು ಎಣ್ಣೆ-ಸೀಗೇಕಾಯಿಯಂತಾಗಿದ್ದು, ಅಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಸುರೇಶ್ ಅಧಿಕಾರಕ್ಕೇರಿದ ದಿನದಿಂದ ಇದು ಮುಂದುವರೆದುಕೊಂಡು ಬಂದಿದೆ. ಆಡಳಿತ ಬಿಗಿಯಾಗಿದ್ದರಿಂದ ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ರಂಪಾಟ ಮುಂದುವರೆದಿದೆ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.
ಪರಿಣಾಮ ಪಟ್ಟಣ ಪಂಚಾಯಿತಿ
(ಮೊದಲ ಪುಟದಿಂದ) ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಮಂಕು ಬಡಿದಿದ್ದು, ಸಾಮಾನ್ಯ ಸಭೆಗಳಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗೆಗಿನ ಚರ್ಚೆಗಿಂತ ವೈಯುಕ್ತಿಕ ನಿಂದನೆ, ಏಕವಚನ ಪ್ರಯೋಗದಲ್ಲೇ ಸಮಯ ವ್ಯರ್ಥ ಮಾಡಲಾಗುತ್ತಿದೆ. ವಾರ್ಡ್‍ಗಳ ಅಭಿವೃದ್ಧಿ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವದಕ್ಕೆ ಸದಸ್ಯರುಗಳ ನಡುವಿನ ಒಳ ಕಿತ್ತಾಟವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಡಳಿತ ಮತ್ತು ವಿರೋಧ ಪಕ್ಷಗಳು ಕಚ್ಚಾಟ ನಡೆಸಲೆಂದೇ ಇರುವದು ಎಂಬ ಭ್ರಮೆ ಸದಸ್ಯರುಗಳನ್ನು ಬಿಟ್ಟಿಲ್ಲ. ಜನ ಸಾಮಾನ್ಯರ ಸಂಕಷ್ಟಗಳಿಗೆ ಒಟ್ಟಾಗಿ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಸಾಮಾನ್ಯ ಸಭೆಗಳಲ್ಲಿ ವರ್ತಿಸುವ ಪರಿ, ಪಂಚಾಯಿತಿಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದೆ. ಇಂತಹ ಒಂದು ‘ದೊಂಬರಾಟ’ ಇಂದಿನ ಸಾಮಾನ್ಯ ಸಭೆಯಲ್ಲೂ ನಡೆಯಿತು.
ಅಧ್ಯಕ್ಷೆ ರಾಜೀನಾಮೆಗೆ ಪಟ್ಟು: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಮುಖ್ಯಾಧಿಕಾರಿ ಎಲ್ಲರನ್ನೂ ಸ್ವಾಗತಿಸಿದ ತಕ್ಷಣ ಎದ್ದು ನಿಂತ ಕಾಂಗ್ರೆಸ್ ಸದಸ್ಯ ಕೆ.ಎ. ಆದಂ ಅವರು, ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮೇಲೆ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದ್ದು, ಅವರು ಅಧ್ಯಕ್ಷೆ ಸ್ಥಾನದಲ್ಲಿ ಇರಲು ಅರ್ಹರಲ್ಲ; ತಕ್ಷಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಜಯಲಕ್ಷ್ಮಿ ಸುರೇಶ್ ‘ವೈಯಕ್ತಿಕ ವಿಚಾರಗಳನ್ನು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ತರಬೇಡಿ. ಪಂಚಾಯಿತಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಚರ್ಚಿಸಿ’ ಎಂದರು. ಇದಕ್ಕೆ ಒಪ್ಪದ ಆದಂ ಸೇರಿದಂತೆ ಕಾಂಗ್ರೆಸ್ ಸದಸ್ಯರಾದ ಮೀನಾಕುಮಾರಿ, ಶೀಲಾ ಡಿಸೋಜ ಅವರುಗಳು, ಅಧ್ಯಕ್ಷರು ರಾಜೀನಾಮೆ ನೀಡಬೇಕು. ನೀಡದಿದ್ದರೆ ಸಭೆಯನ್ನು ಬಹಿಷ್ಕರಿಸುವದಾಗಿ ಹೇಳಿದರು.
ಕೊಡವ ಸಮಾಜದ ಬಳಿ ಸುರೇಶ್ ಅವರು ತಮಗೆ ಸೇರಿದ ಜಾಗಕ್ಕೆ ತಡೆಗೋಡೆ ಕಟ್ಟಿಸಿಕೊಂಡಿದ್ದಾರೆ. ಅಧ್ಯಕ್ಷರ ಮೇಲೆ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತರೆ ಸಮಾಜಕ್ಕೆ ಕೆಟ್ಟಸಂದೇಶ ರವಾನೆಯಾಗುತ್ತದೆ ಎಂದು ಆದಂ ಹೇಳಿದರು. ಈ ಸಂದರ್ಭ ಮುಖ್ಯಾಧಿಕಾರಿ ನಾಚಪ್ಪ ಅವರು ಮಧ್ಯೆ ಪ್ರವೇಶಿಸಿ ‘ವೈಯುಕ್ತಿಕ ವಿಚಾರಗಳು ಇಲ್ಲಿ ಬೇಡ;ಪ್ರಕರಣ ನ್ಯಾಯಾಲಯದಲ್ಲಿದ್ದು, ಇಲ್ಲಿ ಅದರ ಬಗ್ಗೆ ಚರ್ಚಿಸುವದು ಸರಿಯಲ್ಲ. ಪಂಚಾಯಿತಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿದರೆ ಸಾಕು’ ಎಂದರು.
ಆದರೂ ಸುಮ್ಮನಾಗದ ವಿಪಕ್ಷದವರು, ಗದ್ದಲ ಮುಂದುವರೆಸಿದರು. ಈ ನಡುವೆ ಆಡಳಿತಾರೂಢ ಪಕ್ಷದ ಸದಸ್ಯರಾದ ಬಿ.ಎಂ. ಸುರೇಶ್, ಲೀಲಾ ನಿರ್ವಾಣಿ, ಸುಶೀಲ, ಸುಷ್ಮಾ ಅವರುಗಳು ಅಧ್ಯಕ್ಷೆಯ ಪರ ನಿಂತರು. ‘ಸಭೆಗೆ ಸಂಬಂಧಿಸಿದ ವಿಷಯವನ್ನಷ್ಟೇ ಮಾತಾಡಿ’ ಎಂದರು. ಈ ಮಧ್ಯೆ ಬಿ.ಎಂ. ಸುರೇಶ್ ಮತ್ತು ಕೆ.ಎ. ಆದಂ ನಡುವೆ ಏಕವಚನ ಪದ ಪ್ರಯೋಗವಾಯಿತು. ಕಾಂಗ್ರೆಸ್ ಸದಸ್ಯರು ‘ಸಭೆಯಲ್ಲಿ ನಾವು ಇರುವದಿಲ್ಲ’ ಎಂದರು. ಈ ಸಂದರ್ಭ ಎರಡೂ ತಂಡಗಳ ನಡುವೆ ತೀವ್ರ ವಾಗ್ವಾದ ನಡೆಯಿತು.
‘ಜನರಿಂದ ದುಡ್ಡು ತಗಂಡು ತಿಂದಿಲ್ಲ. ಕೆಲಸ ಮಾಡ್ಸಿ ಕೊಡ್ತೀನಿ ಅಂತ ಮೋಸ ಮಾಡಿಲ್ಲ. ನಾನು ಅಧ್ಯಕ್ಷೆಯಾದ ಮೇಲೆ ಟಿ.ಎಂ.ಸಿ.ಯಿಂದ ಹಣ ನುಂಗೋಕೆ ಬಿಟ್ಟಿಲ್ಲ. ಅದಕ್ಕಾಗಿ ನನ್ನ ಮೇಲೆ ಹೀಗೆಲ್ಲಾ ಆರೋಪ ಮಾಡ್ತೀರ? ನಾನು ರಾಜೀನಾಮೆ ಕೊಡಲ್ಲ. ಕಳ್ಳರಿಗೇ ಕಾಲ ಇವಾಗ ಎಂಬಂತಾಗಿದೆ. ಇಂತಹ ಕೀಳುಮಟ್ಟದ ರಾಜಕೀಯ ಮಾಡ್ಬೇಡಿ’ ಎಂದು ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಎದ್ದು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಈ ಸಂದರ್ಭ ಸಭೆಯನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಮಹಿಳಾ ಆಯೋಗಕ್ಕೆ ದೂರು: ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರ ನಡೆಯುತ್ತಿದ್ದಂತೆ ಮಹಿಳಾ ಆಯೋಗದ ಜಿಲ್ಲಾ ಪ್ರತಿನಿಧಿ ಅಶ್ವಿನಿ ಕೃಷ್ಣಕಾಂತ್ ಅವರಿಗೆ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಲಿಖಿತ ದೂರು ನೀಡಿದರು. ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳಾದ ಶೀಲಾ ಡಿಸೋಜ, ಕೆ.ಎ. ಆದಂ, ಮೀನಾಕುಮಾರಿ ಅವರುಗಳು ಪಂಚಾಯಿತಿಗೆ ಸಂಬಂಧಿಸಿಲ್ಲದ ನನ್ನ ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಇದರೊಂದಿಗೆ ಕೆಲ ಮಹಿಳೆಯರು ಪಂಚಾಯಿತಿ ಎದುರು ನನ್ನ ವಿರುದ್ಧ ಕೆಟ್ಟದ್ದಾಗಿ ಧಿಕ್ಕಾರ ಕೂಗಿದ್ದು, ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದರು. ನಂತರ ಸಭೆ ಮುಂದುವರೆಯಿತು.
ಪಂಚಾಯಿತಿ ಎದುರು ಪ್ರತಿಭಟನೆ: ಸಭೆಯ ಆರಂಭಕ್ಕೂ ಮುನ್ನ ಪಟ್ಟಣ ಪಂಚಾಯಿತಿ ಎದುರು 8 ಮಂದಿ ಮಹಿಳೆಯರು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ವಿರುದ್ಧ ಧಿಕ್ಕಾರ ಕೂಗಿದರು. ವರದಕ್ಷಿಣೆ ಕಿರುಕುಳ ದೂರು ದಾಖಲಾಗಿರುವ ಹಿನ್ನೆಲೆ ರಾಜೀನಾಮೆ ನೀಡಬೇಕು. ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ನಾಲ್ಕೈದು ನಿಮಿಷ ಘೋಷಣೆ ಕೂಗಿದ ನಂತರ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಇದು ಅವರ ಖಾಸಗಿ ವಿಷಯ ಎಂದು ಮುಖ್ಯಾಧಿಕಾರಿ ತಿಳಿಸಿದರು. ನೀವು ಹಾಗೆ ಹೇಳಬೇಡಿ;ಯಾವ ಮಹಿಳೆಗೂ ಅನ್ಯಾಯ ಆಗಬಾರದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೆಂಕಟೇಶ್ವರ ಬಡಾವಣೆಯ ಗೌರಮ್ಮ ಹೇಳಿದರು. ನಂತರ ಪ್ರತಿಭಟನೆ ಮುಕ್ತಾಯವಾಯಿತು.
ಪಂ.ಪಂ. ಸದಸ್ಯರೊಬ್ಬರು ವ್ಯಕ್ತಿಯೋರ್ವರಿಗೆ ಹಕ್ಕುಪತ್ರ ನೀಡಲು ರೂ. 30 ಸಾವಿರ ಪಡೆದಿದ್ದಾರೆ. ಈ ವಿಷಯದ ಬಗ್ಗೆ ಇಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲು ತೀರ್ಮಾನಿಸಿ ಅಜೆಂಡಾದಲ್ಲಿಯೇ ವಿಷಯ ಪ್ರಸ್ತಾಪಿಸಲಾಗಿತ್ತು. ಇದರ ಮುನ್ಸೂಚನೆ ಅರಿತ ವಿಪಕ್ಷ ಸದಸ್ಯರು ಅಧ್ಯಕ್ಷರ ವಿರುದ್ಧ ನಾಲ್ಕೈದು ಮಂದಿಯನ್ನು ಕರೆತಂದು ಪ್ರತಿಭಟನೆ ಮಾಡಿಸಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಅಭಿಪ್ರಾಯಿಸಿದರು.
ಒಟ್ಟಾರೆ ಪ.ಪಂ.ನಲ್ಲಿ ಎಲ್ಲವೂ ಸರಿಯಿಲ್ಲ ಎಂಬದು ಮತ್ತೊಮ್ಮೆ ಸಾಬೀತಾಗಿದೆ. ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಕ್ಷುಲ್ಲಕ ರಾಜಕೀಯ, ವೈಯುಕ್ತಿಕ ಆರೋಪ-ಪ್ರತ್ಯಾರೋಪ ಮಾಡುವದರಲ್ಲೇ ಕಾಲ ಕಳೆಯುತ್ತಿದ್ದು, ಸಾಮಾನ್ಯ ಸಭೆಗಳು ದೊಂಬರಾಟದ ವೇದಿಕೆಯಾಗುತ್ತಿದೆ. ಇನ್ನಾದರೂ ಇದು ಬದಲಾಗಲಿ;ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ, ಅಭಿವೃದ್ಧಿಗೆ ಮುನ್ನುಡಿಯಾಗುವ ಸಭೆಗಳು ನಡೆಯಲಿ ಎಂಬದು ಎಲ್ಲರ ಆಶಯ.
-ಸತ್ಯದೇವ್