ಮಡಿಕೇರಿ, ಮಾ. 22: ಇಂದು ಸಂಜೆ ಸಂಭವಿಸಿದ ಬೈಕ್ ಅವಘಡದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಬಳಿ ಸಂಭವಿಸಿದೆ. ಮರಗೋಡು ಬಳಿಯ ವಾಟೆಕಾಡು ನಿವಾಸಿ, ಗುಡ್ಡೆಮನೆ ಚಂದ್ರಶೇಖರ್ ಹಾಗೂ ರೋಹಿಣಿ ದಂಪತಿಯರ ಪುತ್ರ ಯೋಗೇಶ್ ಎಂಬಾತನೇ ಮೃತ ದುರ್ದೈವಿ. ಇಂದು ಸಂಜೆ 4.30 ರ ವೇಳೆಗೆ ಮರಗೋಡುವಿನ ಇಟ್ಟಣಿಕೆ ಲವಿನ್ ಎಂಬಾತನೊಂದಿಗೆ ಬೈಕ್‍ನಲ್ಲಿ ಸಿದ್ದಾಪುರ ಬಳಿಯ ಮಾಲ್ದಾರೆ ಬಳಿ ತೆರಳುತ್ತಿದ್ದ ಸಂದರ್ಭ ಬೈಕ್ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿದೆ. ಹಿಂಬದಿ ಕುಳಿತಿದ್ದ ಯೋಗೇಶ್‍ನ ತಲೆ ಹಾಗೂ ಎದೆಭಾಗಕ್ಕೆ ತೀರಾ ಪೆಟ್ಟಾಗಿದ್ದು, ಮಡಿಕೇರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಲವಿನ್‍ಗೆ ಕಾಲು ಹಾಗೂ ಕೈಗಳಿಗೆ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಮೃತ ಯೋಗೇಶ್ ಈಗ ತಾನೆ ಪ್ರಥಮ ಪಿಯುಸಿ ಪರೀಕ್ಷೆ ಬರೆದಿದ್ದು, ಆತನ ಸಹೋದರಿ ಇದೀಗ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ತಾ. 23 ರಿಂದ ಪರೀಕ್ಷೆ ಬರೆಯಲಿದ್ದಾಳೆ. ಇಂತಹ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿರುವದು ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.ಕೆಲವರ ಪ್ರಕಾರ ಹಿಂಬದಿಯಿಂದ ಪ್ರವಾಸಿಗರ ವಾಹನ ಡಿಕ್ಕಿ ಪಡಿಸಿ ಪರಾರಿಯಾಗಿರುವದಾಗಿ ಹೇಳಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. - ಮಾಹಿತಿ : ವಾಸು ಆಚಾರ್ಯ