ಮಡಿಕೇರಿ, ಮಾ. 22: ನಗರದ ಜನತೆಯ ಬಹು ನಿರೀಕ್ಷೆಯ ಹಾಗೂ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್, ನೂತನ ಖಾಸಗಿ ಬಸ್ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರದ ‘‘ಹೈಟೆಕ್’’ ಮಾರುಕಟ್ಟೆ ಉದ್ಘಾಟನೆಯಾಯಿತಾದರೂ, ಎಲ್ಲೊ ಒಂದು ರೀತಿ ಅತೃಪ್ತಿ... ಅಸಮಾಧಾನದ ಹೊಗೆ ಕಾಣಿಸಿಕೊಂಡಿತು.ನಗರಸಭಾ ಆಯುಕ್ತೆ ಶುಭ ಹಾಗೂ ಸಿಬ್ಬಂದಿಯ ನಿರಂತರ ಪ್ರಯತ್ನವೆಂಬಂತೆ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡರೂ ಅದಕ್ಕೆ ಸಂಬಂಧಿತ ಶಿಲಾಫಲಕ ಹಾಗೂ ಬಸ್ ನಿಲ್ದಾಣ ಉದ್ಘಾಟನೆಯ ಶಿಲಾ ಫಲಕದಲ್ಲಿ ಮಡಿಕೇರಿ ನಿವಾಸಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಹೆಸರಿಲ್ಲ ಎಂಬ ಕಾರಣ ಬಿಜೆಪಿಯವರ ಆಕ್ರೋಶಕ್ಕೆ ಕಾರಣವಾಯಿತು.
ಇನ್ನು ತರಾತುರಿಯಲ್ಲಿ ‘ಚುನಾವಣಾ ಗಿಮಿಕ್’ ಎಂಬಂತೆ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೊಂಡರೂ, ಬಹಳಷ್ಟು ಕೆಲಸ ಪೂರ್ಣಗೊಂಡಿಲ್ಲ. ನೀರು, ವಿದ್ಯುತ್, ಬಸ್ ಸಂಚಾರ ಮಾರ್ಗಸೂಚಿ ಇತ್ಯಾದಿ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಅಪೂರ್ಣ ಕೆಲಸದ ನಡುವೆ ಉದ್ಘಾಟನೆ ಔಚಿತ್ಯವೇನೆಂದು ಬಿಜೆಪಿಯ ಒಂದಿಷ್ಟು ಮಂದಿ ನೇರ ಪ್ರಶ್ನೆಯೊಂದಿಗೆ ಪ್ರತಿಭಟನೆ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಪ್ರಮುಖರು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಉಪಹಾರ ಸೇವಿಸಿ ಬಸ್ ನಿಲ್ದಾಣದ ಉದ್ಘಾಟನೆಗೆ ಮುಂದಾದಾಗ ಬಿಜೆಪಿಯ ಪ್ರತಿಭಟನೆ ವ್ಯಕ್ತವಾಯಿತು. ಬಸ್ ನಿಲ್ದಾಣದ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಏರುಧನಿಯಲ್ಲಿ ‘ಸಚಿವರೇ ಉದ್ಘಾಟನೆ ಮಾಡಬೇಡಿ’ ಎಂದು ಆಗ್ರಹಿಸಿದರು. ಇತ್ತ ಕಾಂಗ್ರೆಸಿಗರು ಪ್ರತಿಘೋಷಣೆ ಕೂಗಿದಾಗ ಗೊಂದಲ ತೀವ್ರಗೊಂಡಿತು. ಈ ನಡುವೆಯೇ ಸಚಿವ ಎಂ.ಆರ್. ಸೀತಾರಾಂ ಉದ್ಘಾಟನೆ ನೆರವೇರಿಸಿದರು.
ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಸುಂದರರಾಜ್, ಪ್ರೊಬೇಷನರಿ ಎಸ್ಪಿ ಯತೀಶ್ ಸಹಿತ ಸಿಬ್ಬಂದಿಗಳು ಪ್ರತಿಭಟನಾ ನಿರತ ಬಿಜೆಪಿ ಪ್ರಮುಖರುಗಳನ್ನು ಸ್ಥಳದಿಂದ
(ಮೊದಲ ಪುಟದಿಂದ) ಹೊರಗೆ ಕಳುಹಿಸುವಲ್ಲಿ ಸಫಲರಾದರು. ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ಬಿಜೆಪಿ ವಿರುದ್ಧ ಪ್ರತಿ ಘೋಷಣೆ ಮೊಳಗಿಸಿ ಸಚಿವರಿಗೆ ಜೈಕಾರ ಹಾಕಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸ್ವತಃ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪ್ರಮುಖರಾದ ಮೋಹನ್ ಮೊಣ್ಣಪ್ಪ, ಡೀನ್ ಬೋಪಣ್ಣ, ಸತೀಶ್, ಪ್ರಶಾಂತ್, ಅರುಣ್ ಕುಮಾರ್, ಜಗದೀಶ್, ಅನಿತಾ ಪೂವಯ್ಯ ಮೊದಲಾದವರು ಪ್ರತಿಭಟಿಸಿದರು.
ಸಭೆಯಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕಳೆದ ಹಲವು ವರ್ಷಗಳಿಂದ ಈ ಖಾಸಗಿ ಬಸ್ ನಿಲ್ದಾಣಕ್ಕಾಗಿ ಮಾಜಿ ಸಚಿವ ದಿ. ಎಂ.ಎಂ. ನಾಣಯ್ಯ ಸೇರಿದಂತೆ ಅನೇಕರ ಪ್ರಯತ್ನ ಇಂದು ನನಸಾಗಿದ್ದು, ಶೇ.75 ಕೆಲಸ ಪೂರ್ಣಗೊಂಡಿದ್ದಾಗಿ ತಿಳಿಸುತ್ತಾ, ಮುಂದೆ ಉಳಿದ ಕೆಲಸಗಳನ್ನು ಶೀಘ್ರ ಪೂರೈಸಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟು ಕೊಡುವದಾಗಿ ಪ್ರಕಟಿಸಿದರು. ಆ ದಿಸೆಯಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಭೆ ನಡೆಸಿ ಬಸ್ ಮಾರ್ಗದ ರೂಪುರೇಷೆ ಕೈಗೊಳ್ಳಲಿರು ವದಾಗಿ ಸ್ಪಷ್ಟಪಡಿಸಿದರು.
ಸಚಿವರ ಪ್ರಯತ್ನ : ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಈ ಸಂದರ್ಭ ಮಾತನಾಡಿ, ಹಸಿದವರಿಗೆ ಅನ್ನ ನೀಡುವ ಸಲುವಾಗಿ ಇಂದಿನಿಂದ ಇಂದಿರಾ ಕ್ಯಾಂಟೀನ್ ಜಾರಿ ಗೊಂಡಿದ್ದು, ಬಸ್ ನಿಲ್ದಾಣವನ್ನು ಚುನಾವಣಾ ಸಂಹಿತೆ ಜಾರಿಗೊಳ್ಳುವ ಹಿನ್ನೆಲೆ ಈ ಬಗ್ಗೆ ಪ್ರಯತ್ನಪಟ್ಟಿರುವ ಹಾಲೀ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ಮುಖಾಂತರವೇ ಉದ್ಘಾಟಿಸಿದ್ದಾಗಿ ನುಡಿದರು.
ಕಲಿತ ವಿದ್ಯೆ ಅವರದ್ದು: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಬಿಜೆಪಿ ಪ್ರತಿಭಟನೆಗೆ ತಿರುಗೇಟು ನೀಡುತ್ತಾ, ‘ಇವರು ಕಲಿತ ವಿದ್ಯೆಯೇ ಇದಾಗಿದೆ’ ಎಂದರಲ್ಲದೆ, ನಿನ್ನೆ ದಿನವಿಡೀ ತಮ್ಮೊಂದಿಗೆ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿದ್ದ ಶಾಸಕ ಬೋಪಯ್ಯ ಅವರನ್ನು ಸ್ವತಃ ಇಂದಿನ ಕಾರ್ಯಕ್ರಮಕ್ಕೆ ತಾವೇ ಆಹ್ವಾನಿಸಿದ್ದಾಗಿ ತಿಳಿಸಿದರು. ಈ ವೇಳೆ ತಾನು ಇಂದು ಬೆಂಗಳೂರಿಗೆ ತೆರಳುವ ಕಾರಣದಿಂದ ಭಾಗಿಯಾಗಲಾರೆ ಎಂದು ಉತ್ತರಿಸಿದ್ದಾಗಿ ವಿವರಿಸಿದ ಸಚಿವರು, ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಕಳೆದ 20 ವರ್ಷಗಳಿಂದ ಶಾಸಕರಾಗಿದ್ದಾಗ, ಅವರದ್ದೇ ಸರಕಾರವಿದ್ದಾಗ ಏನೂ ಮಾಡಲಾರದೆ ಈಗಿನ ಕಾಂಗ್ರೆಸ್ ಸರಕಾರದಿಂದ ಸಾಕಷ್ಟು ಅಭಿವೃದ್ಧಿಯಾ ಗುತ್ತಿರುವದನ್ನು ಸಹಿಸುತ್ತಿಲ್ಲವೆಂದ ಸಚಿವರು, ಹೀಗಿದ್ದೂ, ಬಿಜೆಪಿಗೆ ಜಿಲ್ಲೆಯ ಜನತೆ ಆಶೀರ್ವಾದಿ ಸುತ್ತಿರುವದು ಆಶ್ಚರ್ಯ ತಂದಿದೆ ಎಂದರು.
ಮಾರುಕಟ್ಟೆ ಉದ್ಘಾಟನೆ: ಆ ಬಳಿಕ ಮಡಿಕೇರಿ ಮಾರುಕಟ್ಟೆಯ ನೂತನ ಸಂಕೀರ್ಣವನ್ನು ಸಚಿವರು ಉದ್ಘಾಟಿಸಿದರು. ಈ ಸಂದರ್ಭ ಅಲ್ಲಿನ ವರ್ತಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಇತರರು ಅಪೂರ್ಣ ಕಾಮಗಾರಿ ಬಗ್ಗೆ ಲಿಖಿತ ಮನವಿಯೊಂದಿಗೆ ಸಚಿವರನ್ನು ಸ್ವಾಗತಿಸಿ, ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿದರು. ಮನವಿಗೆ ಸ್ಪಂದಿಸಿದ ಸಚಿವರು ತ್ವರಿತವಾಗಿ ಉಳಿದ ಕಾಮಗಾರಿಗಳನ್ನು ಪೂರೈಸಲು ನಿರ್ದೇಶಿಸಿರುವದಾಗಿ ಭರವಸೆ ನೀಡಿದರು. ಈ ಸಂಬಂಧ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ವರ್ತಕರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಬಾಲಕಿಯರ ಮಂದಿರ: ಆ ನಂತರ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಬಳಿ ನಿರ್ಮಾಣ ಗೊಂಡಿರುವ ನೂತನ ಬಾಲಕಿಯರ ಬಾಲಮಂದಿರವನ್ನು ಸಚಿವರು ಉದ್ಘಾಟಿಸಿದರು. ಅಲ್ಲದೆ ಸ್ತ್ರೀಶಕ್ತಿ ಮಹಿಳಾ ಸಂಘದ ಸಂಚಾರಿ ಕ್ಯಾಂಟೀನ್ಗೆ ಚಾಲನೆಯೊಂದಿಗೆ ಪರವಾನಗಿ ಪತ್ರ ವಿತರಿಸಿದರು. ಅಧಿಕಾರಿ ಮಲ್ಲೇಸ್ವಾಮಿ, ಅಧೀಕ್ಷಕಿ ಮಮ್ತಾಜ್ ಮೊದಲಾದವರು ಹಾಜರಿದ್ದರು.
ಸಚಿವ ಎಂ.ಆರ್. ಸೀತಾರಾಂ ಅವರೊಂದಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿ.ಪಂ. ಸದಸ್ಯರುಗಳಾದ ಕೆ.ಪಿ. ಚಂದ್ರಕಲಾ, ಕುಮುದ ಧರ್ಮಪ್ಪ, ಸುನಿತ, ನಗರಸಭೆಯ ಕಾಂಗ್ರೆಸ್ ಸದಸ್ಯರುಗಳ ಸಹಿತ ಕೆಪಿಸಿಸಿ ಪ್ರಮುಖ ಮಿಟ್ಟು ಚಂಗಪ್ಪ, ಪಕ್ಷದ ಪದಾಧಿಕಾರಿ ಗಳಾದ ಶಿವು ಮಾದಪ್ಪ, ಹರೀಶ್ ಬೋಪಣ್ಣ, ಕೆ.ಎಂ. ಲೋಕೇಶ್, ಅಬ್ದುಲ್ ರಜಾಕ್, ಚುಮ್ಮಿದೇವಯ್ಯ, ಚಂದ್ರಮೌಳಿ ಸೇರಿದಂತೆ ಹಲವರು ಕಾಣಿಸಿಕೊಂಡರು. ಮಾರುಕಟ್ಟೆ ಉದ್ಘಾಟನೆ ವೇಳೆ ಮಾಜೀ ಶಾಸಕ ಕೆ.ಎಂ. ಇಬ್ರಾಹಿಂ ಸಹಿತ ಐಡಿಪಿಐ ಪ್ರಮುಖರು, ನಗರಸಭಾ ಸದಸ್ಯರು ಮತ್ತಿತರರು ಹಾಜರಿದ್ದರು. ಮಾಜೀ ಸಚಿವ ಯಂ.ಸಿ. ನಾಣಯ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಉಪಹಾರ ಸೇವಿಸಿ ಗಮನ ಸೆಳೆದರು.