ವೀರಾಜಪೇಟೆ, ಮಾ. 22: ವೀರಾಜಪೇಟೆ ಸುತ್ತಮುತ್ತಲ ಗ್ರಾಮಗಳಿಂದ ಹುಲ್ಲನ್ನು ತುಂಬಿಸಿ ಕೇರಳದ ಮಟ್ಟನೂರು ಬಳಿಯ ಚಾಲೂರು ಎಂಬಲ್ಲಿಗೆ ತೆರಳುತ್ತಿದ್ದ ಲಾರಿಗೆ (ಕೆ.ಎಲ್.58. 3663) ಆಕಸ್ಮಿಕ ವಾಗಿ ಬೆಂಕಿ ಹಿಡಿದ ಪರಿಣಾಮ ಲಾರಿ ಶೇಕಡ 60ರಷ್ಟು ಜಖಂಗೊಂಡಿದ್ದು, ಲಾರಿ ಪಕ್ಕದಲ್ಲಿದ್ದ ಬೈಕ್ ಹಾಗೂ ಆಟೋ ರಿಕ್ಷಾ ಭಸ್ಮಗೊಂಡು ಒಟ್ಟು ಹತ್ತೂವರೆ ಲಕ್ಷಕ್ಕೂ ಅಧಿಕ ನಷ್ಟ ಉಂಟಾದ ಘಟನೆ ನಡೆದಿದೆ. ಯಾವದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ದಿನ ರಾತ್ರಿ 11.30ರ ಸಮಯದಲ್ಲಿ ಹುಲ್ಲು ತುಂಬಿದ ಲಾರಿಯನ್ನು ಇಲ್ಲಿನ ಮಲಾಬಾರ್ ರಸ್ತೆಯ ಎಚ್.ಎಂ. ಲಾಡ್ಜ್ನ ಮುಂದೆ ನಿಲ್ಲಿಸಿದ್ದಾಗ ಹುಲ್ಲಿನ ಲಾರಿಗೆ ಆಕಸ್ಮಿಕವಾಗಿ (ಮೊದಲ ಪುಟದಿಂದ) ಬೆಂಕಿ ಹಿಡಿದಿದೆ. ಇದೇ ವೇಳೆ 100 ಮೀಟರ್ ಮುಂದೆ ಮುತ್ತಪ್ಪ ತೆರೆ ಮಹೋತ್ಸವದಲ್ಲಿ ಜನಜಂಗುಳಿ ಇದ್ದುದನ್ನು ಕಂಡು ಅನಾಹುತವನ್ನು ತಪ್ಪಿಸಲು ಲಾರಿ ಚಾಲಕ ಸುರೇಶ್ ಸುಮಾರು ಅರ್ಧ ಕಿಲೋ ಮೀಟರ್ ದೂರದ ಅನ್ವರುಲ್ಹುದಾ ವಿದ್ಯಾಸಂಸ್ಥೆಯ ಬಳಿಯ ಆರ್ಜಿ ಗದ್ದೆಯೊಳಗೆ ಬೆಂಕಿ ಹಿಡಿದ ಲಾರಿಯನ್ನು ಕೊಂಡೊಯ್ದು ನಿಲ್ಲಿಸಿದ್ದಾನೆ. ಹುಲ್ಲಿನ ಲಾರಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚುವ ಸಮಯದಲ್ಲಿ ಬೆಂಕಿ ಹಿಡಿದ ಹುಲ್ಲು ಒಂದೇ ಸಮನೆ ಪಕ್ಕದಲ್ಲಿ ನಿಲ್ಲಿಸಿದ್ದ. (ಕೆ.ಎ.12-ಎ 9273) ಆಟೋ ರಿಕ್ಷಾ ಹಾಗೂ (ಕೆ.ಎ.12 ಆರ್.1889) ಬೈಕ್ ಮೇಲೆ ಬಿದ್ದಿದೆ. ಇದರಿಂದ ಎರಡು ವಾಹನಗಳು ಸ್ಥಳದಲ್ಲಿಯೇ ಭಸ್ಮಗೊಂಡಿವೆ. ರಿಕ್ಷಾ ಹೆಗ್ಗಳದ ಅರುಣ್ ಹಾಗೂ ಬೈಕ್ ಪ್ರದೀಪ್ ಕುಮಾರ್ ಎಂಬವರಿಗೆ ಸೇರಿದ್ದೆಂದು ಪೊಲೀಸರು ತಿಳಿಸಿದ್ದಾರೆ.
ಹುಲ್ಲು ಲಾರಿಯ ಮುಂದಿನ ಎರಡು ಟಯರುಗಳು ಸೇರಿದಂತೆ ಒಟ್ಟು 4 ಟಯರುಗಳು ಅರ್ಧದಷ್ಟು ಬೆಂದು ಹೋಗಿದ್ದು, ಕ್ಯಾಬಿನ್ ಬೆಂಕಿಯಿಂದ ಹಾನಿಗೊಂಡು ಮುಂದಿನ ಎರಡು ಗ್ಲಾಸ್ಗಳು ಪುಡಿಯಾಗಿವೆ. ಲಾರಿಯ ಛಾರ್ಸಿಯೂ ಬೆಂಕಿಯಿಂದ ಜಖಂಗೊಂಡಿದೆ. ಲಾರಿಯಲ್ಲಿ ಸುಮಾರು 1200 ಒಣ ಹುಲ್ಲಿನ ಕಂತೆಗಳಿದ್ದು, ಎಲ್ಲವೂ ಭಸ್ಮಗೊಂಡಿವೆ.
ವೀರಾಜಪೇಟೆ ನಗರ ಪೊಲೀಸರು ಹುಲ್ಲಿನ ಲಾರಿಯಿಂದ ವಾಹನಗಳು ಭಸ್ಮಗೊಂಡ ಸ್ಥಳವನ್ನು ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಲಾರಿ ಚಾಲಕ ಸುರೇಶ್, ವಾಹನಗಳ ಮಾಲೀಕರ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ಹುಲ್ಲು ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ್ದಾಗ ದುಷ್ಕರ್ಮಿಗಳು ಹುಲ್ಲಿಗೆ ಬೆಂಕಿ ಕೊಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.