ಗೋಣಿಕೊಪ್ಪ ವರದಿ, ಮಾ. 22: ಕಾವೇರಿ ಕಾಲೇಜುವಿನ ಅಲ್ಯೂಮಿನಿ ಅಸೋಸಿಯೇಷನ್ ಸದಸ್ಯರು ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಉತ್ತಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ ಹೇಳಿದರು. ಕಾವೇರಿ ಅಲ್ಯೂಮಿನಿ ಅಸೋಸಿಯೇಷನ್ ಆಯೋಜಿಸಿದ ಕಾವೇರಿ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮಹತ್ವಾ ಕಾಂಕ್ಷೆಯೊಂದಿಗೆ ಪ್ರಾರಂಭವಾದ ಕಾವೇರಿ ವಿದ್ಯಾಸಂಸ್ಥೆ ರಾಜ್ಯದ ಅತ್ಯುತ್ತಮ 50 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದುದಿರುವದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾವೇರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಪ್ರಗತಿಪರ ರೈತ ಜಮ್ಮಡ ಸೋಮಣ್ಣ, ಸಮಾಜ ಸೇವಕ ಐಚೆಟ್ಟಿರ ರವಿ ಸೋಮಯ್ಯ, ಅಂತರ್ರಾಷ್ಟ್ರೀಯ ಹಾಕಿ ಆಟಗಾರ್ತಿ ಪಟ್ಟಮಾಡ ಜಮುನಾ, ಕಳತ್ಮಾಡು ಲಯನ್ಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಕೆ.ಸಿ. ಪವಿತ್ರ, ಕನ್ನಡ ಉಪನ್ಯಾಸಕಿ ಎಸ್.ಎಂ. ರಜನಿ ಹಾಗೂ ಸಿಬ್ಬಂದಿ ಹೆಚ್.ಕೆ. ಚೆಲುವ ಅವರುಗಳನ್ನು ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಪಟ್ಟಡ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ನಬಾರ್ಡ್ ಅಸಿಸ್ಟೆಂಟ್ ಮೇನೇಜರ್ ಎಂ.ಸಿ. ನಾಣಯ್ಯ, ಮಡನ್ತ್ಯಾರ್ ಸೇಕ್ರೇಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ.ಎನ್. ರಂಜನ್ ಭಾಗವಹಿಸಿದರು. ವಿದ್ಯಾರ್ಥಿ ಸಂಘದ ಸದಸ್ಯರ ನೃತ್ಯ ಪ್ರದರ್ಶನ ಹಾಗೂ ಸುಮಧುರ ಗೀತೆಗಳು ಪ್ರೇಕ್ಷಕರನ್ನು ರಂಜಿಸಿತು. ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಪ್ರಸ್ತುತಪಡಿಸಿದ ಹರದಾಸ ಅಪ್ಪಚ್ಚು ಕವಿಯ ಅಮರ ಕಾವ್ಯ ನೆರೆದಿದ್ದವರ ಮೆಚ್ಚುಗೆಗೆ ಪಾತ್ರ ವಾಯಿತು. ಉಪಾಧ್ಯಕ್ಷ ತಿರುನೆಲ್ಲಿಮಾಡ ಎಂ. ದೇವಯ್ಯ, ಕಾರ್ಯದರ್ಶಿ ವಾಣಿ ಚೆಂಗಪ್ಪ, ಖಜಾಂಚಿ ಪಾಲೇಂಗಡ ಮನು ನಂಜಪ್ಪ, ಸಂಚಾಲಕಿ ಎಸ್.ಎಂ. ರಜನಿ ಹಾಗೂ ಸದಸ್ಯರು ಇದ್ದರು.