ಆಲೂರು-ಸಿದ್ದಾಪುರ, ಮಾ. 21: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿಗೆ ಬಂದ ಲಾಭಂಶವನ್ನು ಉತ್ತಮ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ವಲಯದ ಮೇಲ್ವೀಚಾರಕ ರಮೇಶ್ ಅಭಿಪ್ರಾಯಪಟ್ಟರು.

ಗೋಣಿಮರೂರು ಶ್ರೀ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯ ಮತ್ತು ಗೋಣಿಮರೂರು ಕಾರ್ಯಕ್ಷೇತ್ರದ ಶಬರಿ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಬಂದಿರುವ ಲಾಭಾಂಶ ಪಾಲಿನ ಹಣ ವಿತರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ವಲಯದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸ್ವಸಹಾಯ ಸಂಘಗಳಿಗೆ ಒಟ್ಟು ರೂ. 3 ಕೋಟಿ ಲಾಭಾಂಶ ವನ್ನು ವಿತರಿಸಿದೆ ಎಂದರು. ಹೆಬ್ಬಾಲೆ ವಲಯ ಮತ್ತು ಗೋಣಿಮರೂರು ಕಾರ್ಯಕ್ಷೇತ್ರ ಶಬರಿ ಪ್ರಗತಿ ಬಂಧು ಸ್ವಸಹಾಯ ಸಂಘಕ್ಕೆ ರೂ. 30 ಸಾವಿರ ಲಾಭಾಂಶವಾಗಿದೆ ಎಂದರು. ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಸಂಘಕ್ಕೆ ಬಂದಿರುವ ಲಾಭಾಂಶದ ಹಣವನ್ನು ಉತ್ತಮ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಆರ್ಥಿಕ ವಾಗಿ ಮತ್ತಷ್ಟು ಸಬಲರಾಗುವದರ ಮೂಲಕ ಸಂಸ್ಥೆಯ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.

ಹೆಬ್ಬಾಲೆ ವಲಯದ ಮೇಲ್ವಿಚಾರಕ ವಿನೋದ್ ಮಾತನಾಡಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳು ಉತ್ತಮವಾಗಿ ವ್ಯವಹಾರ ನಡೆಸುತ್ತಿವೆ. ಸಂಘಗಳ ಸದಸ್ಯರು ಶ್ರದ್ಧೆ, ಶಿಸ್ತು ಹಾಗೂ ಹೆಚ್ಚಿನ ಶ್ರಮವಹಿಸಿ ವಹಿವಾಟು ನಡೆಸಿದರೆ ಸಂಘಕ್ಕೆ ಉತ್ತಮ ಲಾಭಾಂಶ ಸಿಗುತ್ತದೆ. ಲಾಭಾಂಶವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಉಷಾ, ನಗದು ಸಂಗ್ರಾಹಕಿ ರಿಹನಾ, ಒಕ್ಕೂಟದ ಅಧ್ಯಕ್ಷ ಸುರೇಂದ್ರ ಗಣಗೂರು ಮುಂತಾದವರಿದ್ದರು.