ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಪ್ರಕರಣ ಹಾಗೂ ಮಡಿಕೇರಿ ನಗರಸಭೆಯ ಅಧ್ಯಕ್ಷ ಸ್ಥಾನ ವಿವಾದದಲ್ಲಿ ತಾವು ಬೆಂಗಳೂರಿನಲ್ಲಿ ಕುಳಿತು ಏಕ ವ್ಯಕ್ತಿ ತೀರ್ಮಾನ ಕೈಗೊಂಡಿಲ್ಲ ಅಥವಾ ಮೂಗು ತೂರಿಸಿಲ್ಲವೆಂದು ಸಚಿವ ಎಂ.ಆರ್. ಸೀತಾರಾಂ ಇಂದಿನ ಸಂವಾದದಲ್ಲಿ ಸ್ಪಷ್ಟಪಡಿಸಿದರು. ಬದಲಾಗಿ ಸ್ವತಃ ಮೇಲ್ಮನೆ ಸದಸ್ಯರ ಅನಿಸಿಕೆ ಪಡೆದು ಆ ಸಂದರ್ಭಕ್ಕೆ ತಕ್ಕಂತೆ ಮಾಧ್ಯಮಗಳ ಮುಖಾಂತರವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಹೇಳಿಕೆ ನೀಡಿದ್ದಾಗಿ ನೆನಪಿಸಿದರು.

ಮಡಿಕೇರಿ ನಗರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಕಾಳಜಿಯಂತೆ ರೂ. ಮೂವತ್ತಾರು ಕೋಟಿ ಅನುದಾನ ಕಲ್ಪಿಸಿದ್ದೆ; ಈ ಮೊತ್ತದಲ್ಲಿ ಕೇವಲ ರೂ. 6 ಕೋಟಿಯಿಂದ ಜಿಲ್ಲಾ ಕೇಂದ್ರ ಪ್ರವೇಶಿಸುವ ರಸ್ತೆಯನ್ನು ವಿಶಾಲಗೊಳಿಸಿ ಜನಾಕರ್ಷಣೆಯ ರೀತಿ ರೂಪಿಸಲು

(ಮೊದಲ ಪುಟದಿಂದ) ಸಲಹೆ ನೀಡಿದ್ದನ್ನು ಜವಾಬ್ದಾರಿಯುತರು ತಳ್ಳಿ ಹಾಕಿದ್ದಾಗಿ ನೆನಪಿಸಿದರು. ಹೀಗಾಗಿ ತಾವು ಅತ್ತ ಮೂಗು ತೂರಿಸದೆ ದೂರ ಉಳಿದಿದ್ದಾಗಿ ಸಮಜಾಯಿಷಿಕೆ ನೀಡಿದರು.

ನಗರಸಭಾ ಅಧ್ಯಕ್ಷರ ಅಧಿಕಾರ ಅವಧಿ ಬಗ್ಗೆ ಪಕ್ಷದ ನಿರ್ಧಾರ ಹೊರತು ತಮ್ಮದೇನೂ ಇಲ್ಲವೆಂದರು. ತಮಗೆ ಇಷ್ಟವಾಗದ ಯಾವ ಕೆಲಸವನ್ನೂ ಅಂತಹವರ ನಡುವೆ ಎಲ್ಲಿಯೂ ಮಾಡಲಾರೆ ಎಂದು ಈ ಸಂಬಂಧ ಎಂ.ಆರ್. ಸೀತಾರಾಂ ಸೂಚ್ಯವಾಗಿ ಉತ್ತರಿಸಿದರು.

ಕೊಡಗಿನಲ್ಲಿ ಟಿಪ್ಪು ಜಯಂತಿ ಸಂದರ್ಭ ಮೊದಲ ವರ್ಷ ಅಹಿತಕರ ಘಟನೆಗೆ ಅಧಿಕಾರಿಯೊಬ್ಬರ ಅಂದಿನ ತಪ್ಪು ನಿರ್ಧಾರ ಕಾರಣವೆಂದು ವ್ಯಾಖ್ಯಾನಿಸಿದ ಸಚಿವರು, ತಮ್ಮ ಅಧಿಕಾರ ಸಂದರ್ಭ ಜನತೆ ಶಾಂತಿ, ಸೌಹಾರ್ಧ ಕಾಪಾಡಿಕೊಂಡಿದ್ದು, ಅಲ್ಪಸಂಖ್ಯಾತರು ಕೂಡ ಸ್ಪಂದಿಸಿದಾಗಿ ನುಡಿದರು.

ಟಿಪ್ಪು ಜಯಂತಿ ಅಥವಾ ಲಿಂಗಾಯಿತ ಧರ್ಮದ ಪ್ರಸಕ್ತ ಬೆಳವಣಿಗೆ ಚುನಾವಣೆಯ ಸಂದರ್ಭ ಕಾಂಗ್ರೆಸ್ ಮೇಲೆ ಯಾವದೇ ವ್ಯತಿರಿಕ್ತ ಪರಿಣಾಮ ಬೀರುವದಿಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಕೊಡಗು ವೈದ್ಯಕೀಯ ಸಂಸ್ಥೆ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿ ವೈದ್ಯಕೀಯ ಚಿಕಿತ್ಸೆ ಆಧುನೀಕರಣವಾಗಲಿದ್ದು, ಸೂಪರ್ ಸ್ಪೇಷಾಲಿಟಿ ಸವಲತ್ತುಗಳು ಜಿಲ್ಲೆಯ ಜನತೆಗೆ ಲಭ್ಯವಾಗಲಿವೆ ಎಂದು ಅವರು ಪ್ರಕಟಿಸಿದರು.