ಮಡಿಕೇರಿ, ಮಾ. 21: ಇಲ್ಲಿನ ಐತಿಹಾಸಿಕ ಕೋಟೆ ಆವರಣದ ಸುತ್ತಲೂ ಜಾಗ ಅತಿಕ್ರಮಣ ತಡೆಗಟ್ಟುವ ದಿಸೆಯಲ್ಲಿ ಭಾರತೀಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ವತಿಯಿಂದ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೋಟೆಯ ತಾಲೂಕು ಕಚೇರಿ ಬಳಿಯ ಮುಖ್ಯದ್ವಾರದ ಬಳಿ ಸರಕಾರಿ ನೌಕರರ ಸಂಘಕ್ಕೆ ಹೊಂದಿಕೊಂಡತೆ, ಕೋಟೆ ಮಹಿಳಾ ಸಮಾಜ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣ ಮೇಲ್ಭಾಗದ ಬೆಟ್ಟ ಶ್ರೇಣಿಯ ರಸ್ತೆಗೆ ಪೂರಕವಾಗಿ ತಡೆಗೋಡೆ ನಿರ್ಮಾಣಗೊಳ್ಳುತ್ತಿದೆ.ಈ ಸಂಬಂಧ ಭಾರತೀಯ ಪ್ರಾಚ್ಯವಸ್ತು ಇಲಾಖೆಯಿಂದ ಗುತ್ತಿಗೆ ಪಡೆದಿರುವ ನವದೆಹಲಿಯ ‘ವಾಕ್ಪೋಸ್ಟ್’ ಉದ್ದಿಮೆ ಈ ಕಾಮಗಾರಿ ಕೈಗೊಂಡಿದ್ದು, ರೂ. 25 ಲಕ್ಷ ವೆಚ್ಚದಲ್ಲಿ 300 ಮೀಟರ್ಗೂ ಅಧಿಕ ತಡೆಗೋಡೆ ಸಹಿತ ಅಗತ್ಯ ಇರುವೆಡೆಗಳಲ್ಲಿ ಗ್ರಿಲ್ಗಳನ್ನು ಕಬ್ಬಿಣದ ಕಂಬಿಗಳಿಂದ ಅಳವಡಿಸಲಾಗುವದು ಎಂದು ಗೊತ್ತಾಗಿದೆ.
ಈಗಾಗಲೇ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಒಂದೆಡೆ ಕಳಚಿ ಬೀಳುತ್ತಿರುವ ಅರಮನೆ ಗೋಚರಿಸಿದರೆ, ಸಂಬಂಧಿಸಿದ ಪರಿಸರ ಸಂರಕ್ಷಣೆಯ ಕಾಮಗಾರಿ ನಡೆಯುತ್ತಿರುವದು ಕಾಣುವಂತಾಗಿದೆ. ಸಂಬಂಧಪಟ್ಟವರು ಆವರಣಗೋಡೆ ನಿರ್ಮಾಣದೊಂದಿಗೆ ಅರಮನೆಯ ಉಳಿವಿನೆಡೆಗೂ ಕಾಳಜಿ ವಹಿಸಬೇಕಿದೆ.