ಮಡಿಕೇರಿ, ಮಾ. 21: ಕೇವಲ 22 ತಿಂಗಳು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ಜಿಲ್ಲೆಯ ಬೆಟ್ಟದಷ್ಟು ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸುವ ಮೂಲಕ, ಸಾಕಷ್ಟು ಅಭಿವೃದ್ಧಿ ಕೈಗೊಂಡಿರುವ ತೃಪ್ತಿಯಿದೆ ಎಂದು ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವ ಎಂ.ಆರ್. ಸೀತಾರಾಂ ಪ್ರತಿಕ್ರಿಯಿಸಿದ್ದಾರೆ. ಕೊಡಗು ಪ್ರೆಸ್‍ಕ್ಲಬ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪತ್ರಿಕಾ ಬಳಗದ ಪ್ರಶ್ನೆಗಳಿಗೆ ಸಮಚಿತ್ತದಿಂದಲೇ ಉತ್ತರಿಸಿದ ಸಚಿವರು, ತಮ್ಮ ಅವಧಿಯ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಬಿಚ್ಚಿಟ್ಟರು.ಜಿಲ್ಲೆಯ ಹೊಣೆಗಾರಿಕೆ ವಹಿಸಿಕೊಂಡ ಬಳಿಕ ಕೊಡಗಿನ ಜನತೆಯ ಬೇಡಿಕೆಗಳನ್ನು ಈಡೇರಿಸುವಲ್ಲಿ ಮಾಧ್ಯಮಗಳ ಸಹಿತ ಎಲ್ಲರ ಸಹಕಾರದಿಂದ ಸಾಧ್ಯವಾಯಿ ತೆಂದು ಸ್ಮರಿಸಿದ ಅವರು, ದಿಡ್ಡಳ್ಳಿ, ಪಾಲೆಮಾಡುವಿನಂತಹ ಸೂಕ್ಷ್ಮ ವಿಚಾರಗಳನ್ನು ಹೊರಗಿನ ಮಂದಿಯ ಹಸ್ತಕ್ಷೇಪ ನಡುವೆ ಬಗೆಹರಿಸಲು ಸಾಧ್ಯವಾದ ಬಗ್ಗೆ ನೆನಪು ಮಾಡಿಕೊಂಡರು.
ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೊಡಗಿನ ಜನತೆಯ ಬೇಕು ಬೇಡಿಕೆಗಳ ಸಲುವಾಗಿ ಇಲಾಖಾವಾರು ಅನುದಾನವೂ ಸೇರಿದಂತೆ ರೂ. 2000 ಕೋಟಿಯಷ್ಟು ವಿವಿಧ ಭಾಬ್ತು ನೆರವು ಕಲ್ಪಿಸಿರುವದಾಗಿ ಸಚಿವರು ಅಂಕಿ ಅಂಶ ನೀಡಿದರು. ಪ್ರಸಕ್ತ ಚುನಾವಣಾ ಹಿನ್ನೆಲೆಯಲ್ಲಿ ವಿಶೇಷ ಅನುದಾನ ಕಲ್ಪಿಸಲು ತೊಡಕು ಇದ್ದು, ಮುಂದೆ ಆ ಮೊತ್ತ ಒದಗಿಸಲಾಗುವದು ಎಂಬದಾಗಿ ಆಶಯ ಹೊರಗೆಡವಿದರು.
ಸಾಧನೆಯ ಅಂಶಗಳು : ಮುಖ್ಯವಾಗಿ ಭಾರತದ ವೀರ ಸೇನಾನಿ ಜ. ಕೆ.ಎಸ್. ತಿಮ್ಮಯ್ಯ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿರುವದು ಬಹಳಷ್ಟು ವರ್ಷಗಳ ಕನಸಿನ ಖಾಸಗಿ ಬಸ್ ನಿಲ್ದಾಣ, ಜಿಲ್ಲಾ ಕೇಂದ್ರ ಮಡಿಕೇರಿಯ ಹೈಟೆಕ್ ಮಾರುಕಟ್ಟೆ, ಮುಖ್ಯಮಂತ್ರಿಗಳ ಕನಸಿನ ಇಂದಿರಾ ಕ್ಯಾಂಟೀನ್, ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಕಾಂಕ್ರೀಟ್ ರಸ್ತೆ, ವೀರಾಜಪೇಟೆ ಮಿನಿ ವಿಧಾನಸೌಧ ಇತ್ಯಾದಿಗಳನ್ನು ಬೊಟ್ಟು ಮಾಡಿದರು.
11 ಸಾವಿರ ಹಕ್ಕುಪತ್ರ: ಬಹಳಷ್ಟು ವರ್ಷಗಳ ಗಂಭೀರ ಸಮಸ್ಯೆಯಾಗಿದ್ದ ವಸತಿ ನಿವೇಶನ
(ಮೊದಲ ಪುಟದಿಂದ) ಮತ್ತು ಹಾರಂಗಿ ಹಿನ್ನೀರಿನ ಪುನರ್ವಸತಿ ಗ್ರಾಮ ಮಂಜೂರಾತಿ ಅಂಶ ಉಲ್ಲೇಖಿಸಿದ ಸಚಿವರು, ಇದುವರೆಗೆ 11 ಸಾವಿರ ಮಂದಿಗೆ ಜಿಲ್ಲೆಯಲ್ಲಿ ಹಕ್ಕುಪತ್ರವನ್ನು ಕಾಯ್ದೆ 94‘ಸಿ’ ಮತ್ತು 94ಸಿಸಿ ಅಡಿಯಲ್ಲಿ ನೀಡಿದ ತೃಪ್ತಿ ಇದೆ ಎಂದರು. ಈ ಬಗ್ಗೆ ಕಂದಾಯ ಸಚಿವರ ಸಹಕಾರವನ್ನು ಸ್ಮರಿಸಿಕೊಂಡರು.
ತಲಕಾವೇರಿ ಅಭಿವೃದ್ಧಿ: ತಲಕಾವೇರಿ - ಭಾಗಮಂಡಲ ಕ್ಷೇತ್ರದ ಅಭಿವೃದ್ಧಿಗೆ ರೂ. 25 ಕೋಟಿ ಮೊತ್ತದ ಯೋಜನೆಯೊಂದಿಗೆ, ಕ್ಷೇತ್ರದ ಪಾವಿತ್ರ್ಯ ಕಾಪಾಡಿಕೊಂಡು ಜಾಗತಿಕ ಮಟ್ಟದ ಟೆಂಡರ್ ಪ್ರಕ್ರಿಯೆ ಮೂಲಕ ಕಾಮಗಾರಿ ನಡೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ವಿವಿಧ ಸವಲತ್ತು: ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕುಶಾಲನಗರದ ತಾಂತ್ರಿಕ ಕಾಲೇಜು ಸೇರಿದಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಮತ್ತು ಸಂಬಂಧಿಸಿದವರಿಗೆ ಅನುಕೂಲತೆ ಕಲ್ಪಿಸಿರುವದಾಗಿ ಮಾಹಿತಿ ನೀಡಿದರು. 94 ಸಾವಿರ ಮಂದಿಗೆ ಅನ್ನಭಾಗ್ಯ ಒದಗಿಸಲಾಗಿದೆ ಎಂದರು.
ತಾರಾಲಯಕ್ಕೆ ಒತ್ತು : 2010ರ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಮಚಂದ್ರಗೌಡ ಅವರ ಕಾಲದ ಆರ್ಥಿಕ ಯೋಜನೆ ನೆನೆಗುದಿಗೆ ಬಿದ್ದಿದ್ದ ಹಣ ಬಳಸಿಕೊಂಡು ನಗರದಲ್ಲಿ ಮಿನಿ ತಾರಾಲಯ ಹಾಗೂ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಚಿವರು ಈ ಬಗ್ಗೆ ಬಿಜೆಪಿ ಶಾಸಕರುಗಳು ಆಸಕ್ತಿ ತೋರಲಿಲ್ಲವೇಕೆ? ಎಂದು ಪ್ರಶ್ನಿಸಿದರು.
ಕಾಡಾನೆ ಸಮಸ್ಯೆ ವ್ಯಾಪಕ : ಕಾಡಾನೆ- ಮಾನವ ಸಂಘರ್ಷ ಇಡೀ ವಿಶ್ವದ ಹಾಗೂ ದೇಶದ ಮತ್ತು ಬಹುತೇಕ ರಾಜ್ಯಗಳ ಸಮಸ್ಯೆಯಾಗಿದ್ದು, ಕರ್ನಾಟಕದಲ್ಲಿ ಆನೆಗಳು, ಸಿಂಹ, ಹುಲಿ ಸಂತತಿ ಹೆಚ್ಚಿದ್ದು, ಇಂತಹ ಸಮಸ್ಯೆ ಬಗೆ ಹರಿಸಲು ಸಾಕಷ್ಟು ಯೋಜನೆ ಹಂತ ಹಂತವಾಗಿ ರೂಪುಗೊಳ್ಳುತ್ತಿದೆ ಎಂದು ಸಚಿವ ಸೀತಾರಾಂ ಸಮರ್ಥನೆ ನೀಡಿದರು.
ಕೆಡಿಪಿ ಸಭೆ: ಜಿಲ್ಲೆಯಲ್ಲಿ ಸಚಿವರು, ಶಾಸಕರ ದಿನಾಂಕಗಳನ್ನು ತಿಳಿದು ಜಿಲ್ಲಾಡಳಿತ ನಿಯೋಜಿಸುವ ಪ್ರಗತಿ ಪರಿಶೀಲನಾ ಸಭೆಗಳಿಗೆ ಶಾಸಕರು ಗೈರು ಹಾಜರಾಗಿ ತಮ್ಮ ಮೇಲೆ ದೂಷಿಸುವದು ಸರಿಯಲ್ಲ ಎಂದ ಸಚಿವರು, ಯಾರೊಬ್ಬರ ಬಗ್ಗೆಯೂ ತಮಗೆ ಪಕ್ಷಪಾತ ಅಥವಾ ವೈಯಕ್ತಿಕ ದ್ವೇಷ ಮಾಡುವ ಅಗತ್ಯವಿಲ್ಲವೆಂದು ಮಾರ್ನುಡಿದರು.
ಹಾರಂಗಿ ಪರಿಶೀಲನೆ: ಹಾರಂಗಿ ಜಲಾಶಯ ಎದುರು ಉದ್ಯಾನದಲ್ಲಿ ಪ್ರವಾಸಿಗರನ್ನು ನಿರ್ಬಂಧಿಸಿರುವ ಬಗ್ಗೆ ತಾ. 22ರಂದು (ಇಂದು) ಖುದ್ದು ಪರಿಶೀಲನೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಸ್ತೆ, ಒಳಚರಂಡಿ, ಇತರ ಸಮಸ್ಯೆಗಳಿಗೆ ಸ್ಥಳೀಯ ಆಡಳಿತಗಳು ಒತ್ತು ನೀಡಬೇಕೆಂದು ಇದೇ ಸಂದರ್ಭ ಅವರು ಪ್ರತಿಕ್ರಿಯಿಸಿದರು.
ರೈಲ್ವೆಗೂ ಸಹಮತ: ಪರಿಸರವಾದಿಗಳು ರೈಲ್ವೆ ಯೋಜನೆ ವಿರೋಧಿಸಿದ ಕಾರಣ ತಾವು ಕೇಂದ್ರಕ್ಕೆ ಆಕ್ಷೇಪಿಸಿರುವದಾಗಿ ಸ್ಪಷ್ಟಪಡಿಸಿದ ಸಚಿವರು, ಬಹುಮತದ ಅಭಿಪ್ರಾಯದಂತೆ ಕೊಡಗಿನ ಗಡಿ ಕುಶಾಲನಗರ ತನಕ ರೈಲ್ವೆ ಯೋಜನೆಗೆ ಸಹಮತವಿದೆ ಎಂದು ಸ್ಪಷ್ಟನೆ ನೀಡಿದರು. ಕೇರಳ ಮೂಲಕ ದಕ್ಷಿಣ ಕೊಡಗಿನ ಮಾರ್ಗ ಯೋಜನೆಯನ್ನು ಪರಿಸರ ನಾಶದ ಕಾರಣ ಜನತೆಯ ಧನಿಯಾಗಿ ವಿರೋಧಿಸುವದಾಗಿಯೂ ಅವರು ಪುನರುಚ್ಚರಿಸಿದರು.
ಇಂದಿನ ಸಂವಾದ ಕಾರ್ಯಕ್ರಮದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಎ.ಆರ್. ಕುಟ್ಟಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಸುಬ್ರಮಣಿ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ಹಿರಿಯ ವಕೀಲ ಚಂದ್ರಮೌಳಿ, ವೆಂಕಪ್ಪ ಗೌಡ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಯಾಕೂಬ್ ಸೇರಿದಂತೆ ಇತರರು ಹಾಜರಿದ್ದರು. ಕ್ಲಬ್‍ನ ಪದಾಧಿಕಾರಿಗಳಾದ ಭೂತನಕಾಡು ವಿಘ್ನೇಶ್ ಸ್ವಾಗತಿಸಿ, ಎಂ.ಎ. ಅಜಿಜ್ ವಂದಿಸಿದರು.