ಸೋಮವಾರಪೇಟೆ, ಮಾ. 20: ಕಳೆದ ತಾ. 3 ರಂದು ಚಾಲನೆ ನೀಡಿದ ಯಡೂರು ಕೆರೆಯ ಹೂಳೆತ್ತುವ ಕಾರ್ಯ ಮುಕ್ತಾಯಗೊಂಡಿದ್ದು, ಕೆರೆ ಯಲ್ಲಿ ಜಲದ ಕಣ್ಣು ತೆರೆದಿರು ವದರಿಂದ ಗ್ರಾಮಸ್ಥರು ಹರ್ಷಗೊಂಡಿದ್ದಾರೆ.
ಉದ್ಯಮಿ ಹಾಗೂ ದಾನಿಯಾಗಿರುವ ಹರಪಳ್ಳಿ ರವೀಂದ್ರ ಅವರು ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಸುಮಾರು 8.50ಲಕ್ಷ ವೆಚ್ಚ ಮಾಡಿ ಈ ಕೆರೆಯ ಹೂಳೆತ್ತಿಸಿದ್ದು, ಸಾರ್ವಜನಿಕರ ಉಪಯೋಗಕ್ಕೆ ಒದಗಿಸಿದ ಕ್ರಮಕ್ಕೆ ಎಲ್ಲೆಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಸುಮಾರು ಎರಡು ಎಕರೆ ವಿಸ್ತೀರ್ಣದ ಯಡೂರು ಕೆರೆಯಲ್ಲಿ ಹೂಳುತುಂಬಿ ಬತ್ತಿದ್ದನ್ನು ಕಂಡ ರವೀಂದ್ರ ಅವರು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದು, 14 ದಿನಗಳ ನಂತರ ಕೆರೆಯ ಹೂಳನ್ನು ತೆಗೆಯಲಾಗಿದೆ. ಇದೀಗ ಕೆರೆಯಲ್ಲಿ ಜಲದ ಕಣ್ಣು ತೆರೆದಿದ್ದು, ನೀರು ಶೇಖರಣೆಗೊಳ್ಳುತ್ತಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ರವೀಂದ್ರ ಅವರು, ಕೆರೆಗಳ ಪುನಶ್ಚೇತನದಿಂದ ಮಾತ್ರ ಅಂತರ್ಜಲ ಉಳಿಸಿಕೊಳ್ಳಲು ಸಾಧ್ಯ. ಇತ್ತೀಚೆಗಂತೂ 500 ಅಡಿ ಬೋರ್ವೆಲ್ ತೆಗೆದರೂ ನೀರು ಸಿಗುತ್ತಿಲ್ಲ. ಕೊಡಗಿನಂತಹ ಮಲೆನಾಡು ಪ್ರದೇಶದಲ್ಲಿ ಹೀಗಾದರೆ ಬೇರೆಡೆಯ ಪರಿಸ್ಥಿತಿ ಏನು? ಮುಂದಿನ ಕೆಲ ವರ್ಷಗಳಲ್ಲೇ ಕೊಡಗಿನಲ್ಲಿ ನೀರಿಗೆ ಹಾಹಾಕಾರ ಪ್ರಾರಂಭವಾಗಬಹುದು ಎಂದರು.
ಈ ನಿಟ್ಟಿನಲ್ಲಿ ಈಗಲೇ ಜಾಗ್ರತೆ ವಹಿಸುವದು ಅಗತ್ಯ. ಆದ್ದರಿಂದ ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದು, ಯಡೂರು ಕೆರೆಯ ಹೂಳೆತ್ತುವ ಕಾರ್ಯ ಮುಗಿದಿದೆ. ಆನೆಕೆರೆಯಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆಗಳ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುವದು. ಸಮಾಜವೂ ತನ್ನೊಂದಿಗೆ ಸಹಕಾರ ನೀಡಬೇಕು ಎಂದರು.
ಒಟ್ಟಾರೆ ಕಳೆದ 20 ವರ್ಷಗಳಿಂದ ಯಾವದೇ ಸರ್ಕಾರ, ಜನಪ್ರತಿನಿಧಿ, ಅಧಿಕಾರಿಗಳು ಮಾಡದ ಕಾರ್ಯವನ್ನು ಕೃಷಿಕ ಕುಟುಂಬದಿಂದ ಬಂದ ರವೀಂದ್ರ ಅವರು ಕೈಗೊಂಡಿರುವದು ಅಭಿನಂದನಾರ್ಹ ಎಂದು ಯಡೂರು ಗ್ರಾಮಸ್ಥರೊಂದಿಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.