ಕುಶಾಲನಗರ, ಮಾ. 20: ಕಾವೇರಿ ನದಿಯಲ್ಲಿ ನೀರಿನ ಕೊರತೆ ಎದುರಾಗುವದರೊಂದಿಗೆ ಜಲಚರಗಳು ಸಾವನ್ನಪ್ಪುತ್ತಿರುವ ದೃಶ್ಯಗಳು ಕಂಡುಬಂದಿವೆ. ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದ್ದು ನಗರ, ಪಟ್ಟಣಗಳ ಕೊಳಚೆ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿರುವದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಕುಶಾಲನಗರ, ಗುಡ್ಡೆ ಹೊಸೂರು, ಕಾವೇರಿ ನಿಸರ್ಗಧಾಮ, ದುಬಾರೆ ಮತ್ತಿತರ ಪ್ರದೇಶಗಳಲ್ಲಿ ಕಲ್ಲು ಬಂಡೆಗಳ ನಡುವೆ ನಿಂತಿರುವ ನೀರು ವಾಸನಾಯುಕ್ತವಾಗಿ ಜಲಚರಗಳಿಗೆ ಕಂಟಕವಾಗಿ ಪರಿಣಮಿಸತೊಡಗಿದೆ.
ಇದರೊಂದಿಗೆ ನದಿಯಲ್ಲಿ ಸ್ನಾನ, ಬಟ್ಟೆ ಬರೆ ತೊಳೆಯಲು ತೆರಳುತ್ತಿರುವ ಕೆಲವು ನಾಗರಿಕರು ಕೂಡ ನೀರಿನ ಬಳಕೆ ಮಾಡುವ ಮೂಲಕ ಚರ್ಮ ವ್ಯಾಧಿಗಳಿಗೆ ತುತ್ತಾಗುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದೆ. ನದಿ ನೀರಿಗೆ ರಾಸಾಯನಿಕ ತ್ಯಾಜ್ಯಗಳು ಸೇರುತ್ತಿರುವದು ಇದಕ್ಕೆ ಕಾರಣ ಎನ್ನಲಾಗಿದೆ.
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಭಾರೀ ಗಾತ್ರದ ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಗೋಚರಿಸಿದೆ. ಇನ್ನೆರೆಡು ದಿನಗಳಲ್ಲಿ ನದಿ ಹರಿವಿನ ಸ್ಥಿತಿಗೆ ಮರಳದಿದ್ದಲ್ಲಿ ಆತಂಕದ ದಿನಗಳು ಎದುರಾಗುವದು ಖಚಿತ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನದಿ ಸ್ವಚ್ಛತೆ: ನದಿಯಲ್ಲಿ ಎಲ್ಲೆಂದರಲ್ಲಿ ಬಟ್ಟೆ ಮತ್ತಿತರ ತ್ಯಾಜ್ಯಗಳನ್ನು ಎಸೆಯುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ನದಿ ಕಲುಷಿತಗೊಳ್ಳುತ್ತಿರುವ ಹಿನ್ನೆಲೆ ಕಾವೇರಿ ಪರಿಸರ ರಕ್ಷಣಾ ಬಳಗದ ಸದಸ್ಯರು, ಕುಶಾಲನಗರ ಪಟ್ಟಣ ಪಂಚಾಯಿತಿ ಕಾರ್ಮಿಕರ ಸಹಯೋಗದೊಂದಿಗೆ ನದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ತೊಡಗಿಸಿಕೊಂಡರು.