ಸೋಮವಾರಪೇಟೆ, ಮಾ. 20: ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶೀಥಲೀಕರಣದ ಶವಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಲಾಯಿತು.

ಸೋಮವಾರಪೇಟೆಯ ಸೀತಾರಾಮ್ ಅವರ ಪುತ್ರ ಅನಿಲ್ ಅವರು ತಮ್ಮ ಚಿಕ್ಕಪ್ಪ ದಿ. ಪ್ರಭಾಕರ್ ಅವರ ನೆನಪಿಗಾಗಿ ಈ ಶೀಥಲೀಕರಣದ ಶವಪೆಟ್ಟಿಗೆಯನ್ನು ಪ್ರಾಯೋಜಿಸಿದ್ದು, ಲಯನ್ಸ್ ಸಂಸ್ಥೆಯ ನೆರವಿನೊಂದಿಗೆ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮೂಲಕ ಆಸ್ಪತ್ರೆಗೆ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ಕೆಲವೊಮ್ಮೆ ವ್ಯಕ್ತಿ ಮರಣ ಹೊಂದಿದ ಸಂದರ್ಭ ಶವವನ್ನು ಮೂರರಿಂದ ನಾಲ್ಕು ದಿನಗಳವರೆಗೆ ಸಂರಕ್ಷಿಸಿ ಇಡಬೇಕಾಗುತ್ತಿದೆ. ಇದನ್ನು ಮನಗಂಡ ಲಯನ್ಸ್ ಸಂಸ್ಥೆ ಅನಿಲ್ ಅವರ ಸಹಕಾರದಿಂದ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿರುವದು ಶ್ಲಾಘನೀಯ ಎಂದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಹೇಶ್ ಮಾತನಾಡಿ, ಈ ಶೀಥಲೀಕರಣ ಘಟಕದಲ್ಲಿ ವ್ಯಕ್ತಿಯ ಶವವನ್ನು 7 ದಿನಗಳ ವರೆಗೆ ಸಂರಕ್ಷಿಸಿ ಇಡಬಹುದಾಗಿದೆ ಎಂದು ಮಾಹಿತಿ ಒದಗಿಸಿದರು. ಈ ಸಂದರ್ಭ ಲಯನ್ಸ್ ಜಿಲ್ಲಾ ಗವರ್ನರ್ ಹರೀಶ್, ಘಟಕದ ದಾನಿ ಅನಿಲ್, ಲಯನ್ಸ್ ಸದಸ್ಯರುಗಳಾದ ನಿರ್ವಾಣಿ ಶೆಟ್ಟಿ, ಲೀಲಾರಾಂ, ಜಗದೀಶ್, ಯೋಗೇಶ್ ಸೇರಿದಂತೆ ಇತರರು, ತಾ.ಪಂ. ಸದಸ್ಯ ಧರ್ಮಪ್ಪ, ಪ್ರಮುಖರಾದ ಸೋಮೇಶ್, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.