ಸೋಮವಾರಪೇಟೆ, ಮಾ. 20: ತಾಲೂಕಿನ ನೆಲ್ಲಿಹುದಿಕೇರಿ ಹೊಳೆಯಿಂದ ನಕಲಿ ಪರ್ಮಿಟ್ ಬಳಸಿ ಕುಶಾಲನಗರಕ್ಕೆ ಮರಳು ಸಾಗಾಟ ಮಾಡಿರುವ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಯ ಬೇಕಾದ ಅಗತ್ಯವಿದ್ದು, ಮರಳು ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ, ಲೋಕೋಪ ಯೋಗಿ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಿಂದ ಯಾವದೇ ಮರಳಿನ ಪರವಾನಗಿಯನ್ನು ನೀಡುತ್ತಿಲ್ಲ. ಆದರೆ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಸಹಿಯನ್ನು ದುರ್ಬಳಕೆ ಮಾಡಿಕೊಂಡು ನೆಲ್ಲಿಹುದಿಕೇರಿಯಿಂದ ಮರಳು ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ನೆಲ್ಲಿಹುದಿಕೇರಿಯಿಂದ ಕುಶಾಲನಗರದ ಕಲಾಭವನಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡಲು ಯತ್ನಿಸಿದಾಗ, ಮರಳು ಸಾಗಾಟದಾರರು ನಕಲಿ ಪರವಾನಗಿಯನ್ನು ಹೊಂದಿರುವದನ್ನು ಸಿದ್ದಾಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಲಾಭವನದ ಗುತ್ತಿಗೆದಾರ ಪೀತಾಂಬರ ರಾಜು ಮತ್ತು ವಾಹನ ಮಾಲೀಕರ ಮೇಲೆ ಮಾತ್ರ ಮೊಕದ್ದಮೆ ದಾಖಲಾಗಿದೆ. ಸಹಿ ದುರ್ಬಳಕೆ ಮಾಡಿರುವ ಇಲಾಖಾ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲಾಗಬೇೀಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿದ್ದ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಅಕ್ರಮ ಮರಳು ಸಾಗಾಟದ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದ್ದರೂ ಈವರೆಗೆ ತನಿಖೆ ಪ್ರಾರಂಭಿಸಿಲ್ಲ. ನಕಲಿ ಪರ್ಮಿಟ್ ಸೃಷ್ಟಿಸಿರುವವರನ್ನು ಕಂಡುಹಿಡಿಯುವ ಮೂಲಕ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಕರವೇ ನಗರಾಧ್ಯಕ್ಷ ಮಂಜುನಾಥ್ ಮಾತನಾಡಿ, ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಈ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಂಡುಬರುತ್ತಿದೆ. ಇಂತಹ ನಿರ್ಲಕ್ಷ್ಯವನ್ನು ಕರವೇ ಖಂಡಿಸುತ್ತದೆ ಎಂದರು. ಜಿಲ್ಲಾ ಘಟಕದ ಕಾರ್ಯದರ್ಶಿ ಸತೀಶ್‍ಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್ ಗೋಷ್ಠಿಯಲ್ಲಿದ್ದರು.