ಮಡಿಕೇರಿ, ಮಾ. 20: ಯುಗಾದಿಯ ಹೊಸ ವರ್ಷಾರಂಭದ ದಿನದಂದು ಇಲ್ಲಿನ ಬಾಲಭವನ ಆವರಣದೊಳಗೆ ಮಡಿಕೇರಿ ಪಟ್ಟಣವೂ ಸೇರಿದಂತೆ ತಾಲೂಕಿನ ಗ್ರಾಮೀಣ ಮಹಿಳೆಯರು ಬಿರುಸಿನ ವ್ಯಾಪಾರ ನಡೆಸಿದರು. ತಾವು ಬೆಳೆದಿರುವ ಸೊಪ್ಪು, ತರಕಾರಿ ಸಹಿತ ಗೃಹೋಪಯೋಗಿ ವಸ್ತುಗಳು, ಸ್ವಚ್ಛತಾ ಸಾಮಗ್ರಿ ಇತ್ಯಾದಿಯನ್ನು ಮಾರಾಟಗೊಳಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ದೃಶ್ಯ ಗೋಚರಿಸಿತು. ಮಡಿಕೇರಿ ತಾಲೂಕು ಮಹಿಳಾ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಇಂದಿನ ಮಾರಾಟ ಮೇಳವು ಇಲ್ಲಿನ ಶುಕ್ರವಾರದ ಸಂತೆಯನ್ನು ಸೋಮವಾರ ನಗರದಲ್ಲಿ ಕಾಣುವಂತಿತ್ತು. ಪ್ರತ್ಯೇಕ ಸ್ತ್ರೀಶಕ್ತಿ ಗುಂಪುಗಳ ಹಾಗೂ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಆರ್ಥಿಕ ಸಬಲೀಕರಣ ದಿಕ್ಕಿನಲ್ಲಿ ವ್ಯಾಪಾರ ಕೈಗೊಂಡು ತಮ್ಮ ಚಾಕಚಕ್ಯತೆಯನ್ನು ಈ ಮೂಲಕ ಪ್ರದರ್ಶಿಸುತ್ತಾ ಗಮನ ಸೆಳೆದರು.