ಸೋಮವಾರಪೇಟೆ,ಮಾ.19: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಡುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಕುಮಾರಳ್ಳಿ ಹಾಗೂ ಕೊತ್ನಳ್ಳಿ ಗ್ರಾಮಸ್ಥರು ತಮ್ಮ ಜಮೀನಿನ ಸರ್ವೆ ಕಾರ್ಯಕ್ಕೆ ಆಗ್ರಹಿಸಿ ಇಂದು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಹಿಂದೆ ಫಾರಂ 53 ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಸಹ ಇದೀಗ ಸರ್ವೆ ಕಾರ್ಯ ನಡೆಸುತ್ತಿಲ್ಲ. ಈ ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿರುವದರಿಂದ ಸರ್ವೆ ಇಲಾಖೆಯವರು ಸರ್ವೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಎರಡೂ ಗ್ರಾಮಗಳ ನೂರಾರು ಸಾರ್ವಜನಿಕರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಸರ್ವೆ ಇಲಾಖೆಯ ಸೂಪರ್‍ವೈಸರ್ ನಾಗರಾಜ್ ಮಾತನಾಡಿ, ಕುಮಾರಳ್ಳಿ ಮತ್ತು ಕೊತ್ನಳ್ಳಿ ಗ್ರಾಮಗಳ ಹೆಸರು ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖವಿದ್ದು, ಹಕ್ಕುಪತ್ರ ನೀಡುವ ಸಂಬಂಧ ಸರ್ವೆ ಮಾಡಬಹುದೇ ಎಂದು ತಾಲೂಕು ತಹಸೀಲ್ದಾರ್‍ಗೆ ಪತ್ರ ಬರೆದು ವಿವರಣೆ ಕೇಳಲಾಗಿದೆ. ಅಲ್ಲಿಂದ ವರದಿ ಬಂದ ನಂತರ ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಈ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಅಂತಹ ಆದೇಶ ಬಂದಿದೆಯೇ? ಬಂದಿದ್ದರೆ ನಮಗೆ ತೋರಿಸಿ ಎಂದು ಸೂಪರ್‍ವೈಸರ್ ನಾಗರಾಜ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ, ಸರ್ವೆ ಮಾಡುವದಷ್ಟೇ ನಿಮ್ಮ ಕೆಲಸ; ಅದನ್ನು ಮಾಡಿ ಎಂದು ತಾಕೀತು ಮಾಡಿದರು.

ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಲಂಚ ಮಿತಿ ಮೀರಿದೆ. ಹಣ ಕೊಟ್ಟವರ ಸರ್ವೆ ಬೇಗ ಆಗುತ್ತದೆ. ಬಡವರ ಕೆಲಸ ನಡೆಯುವದಿಲ್ಲ. ತಾಲೂಕು ಕಚೇರಿಯ ಮಹಿಳಾ ಸಿಬ್ಬಂದಿಯೋರ್ವರು ಕಡತಗಳನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡು ಪ್ರತಿ ಕಡತಕ್ಕೂ 7 ರಿಂದ 10 ಸಾವಿರ ಬೇಡಿಕೆ ಇಡುತ್ತಿದ್ದಾರೆ. ಅವರನ್ನು ಇಲ್ಲಿಗೆ ಕರೆಸಿ ಎಂದು ಒತ್ತಾಯಿಸಿದ ಪ್ರತಿಭಟನಾಕರರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವದಿಲ್ಲ ಎಂದು ಪಟ್ಟುಹಿಡಿದರು.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಶಿರಸ್ತೇದಾರ್ ಶಶಿಧರ್ ಅವರು, ಈಗಾಗಲೇ ಫಾರಂ 53ರಡಿ ಅರ್ಜಿ ಸಲ್ಲಿಸಿರುವವರ ಜಮೀನನ್ನು ನಾಳೆಯಿಂದಲೇ ಸರ್ವೆ ಮಾಡಲಾಗುವದು. ಸರ್ವೆಗಾಗಿ ಯಾರಿಗೂ ಹಣ ಕೊಡಬೇಕಾದ ಅಗತ್ಯವಿಲ್ಲ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಈ ಸಂದರ್ಭ ಕುಮಾರಳ್ಳಿ ಗ್ರಾಮಾಧ್ಯಕ್ಷ ಎ.ಕೆ. ಚಂಗಪ್ಪ, ಕೊತ್ನಳ್ಳಿ ಗ್ರಾಮಾಧ್ಯಕ್ಷ ಡಿ.ಪಿ. ತಮ್ಮಯ್ಯ, ಕಾರ್ಯದರ್ಶಿ ಧನಂಜಯ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್, ಬೆಟ್ಟದಳ್ಳಿ ಗ್ರಾ.ಪಂ. ಮಾಜೀ ಸದಸ್ಯ ಕುಮಾರಳ್ಳಿ ಪ್ರದೀಪ್, ಪ್ರಮುಖರಾದ ದೇಶ್‍ರಾಜ್, ಕಿಶನ್, ಬಸಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.