ಕೂಡಿಗೆ, ಮಾ. 19: ಮದುವೆಯಾಗಿ ಗಂಡನ ಮನೆ ಸೇರಿದ್ದ.., ಹಬ್ಬಕ್ಕೆ ಸಂಭ್ರಮದಿ ತವರು ಮನೆಗೆ ಬರಬೇಕಾಗಿದ್ದ ಹೆಣ್ಣು ಮಗಳೋರ್ವಳು ಶವವಾಗಿ ಬಂದಿರುವ ಮನಕಲಕುವ ಘಟನೆ ಸಂಭವಿಸಿದೆ.ಅತ್ತೆ-ಸೊಸೆಯರ ಜಗಳಕ್ಕೆ ಸೊಸೆ ಬಲಿಯಾಗಿದ್ದಾಳೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮದ ಅತ್ತೂರು-ನಲ್ಲೂರು ನಿವಾಸಿ ಶೋಭಾ (21) ಎಂಬಾಕೆಯೇ ಹತ್ಯೆಗೀಡಾದ ದುರ್ದೈವಿ.ಅತ್ತೂರು-ನಲ್ಲೂರಿನ ಕಾರ್ಮಿಕರಾಗಿರುವ ಧರ್ಮ ಎಂಬವರ ಪುತ್ರಿ ಶೋಭಾಳನ್ನು ಅವರ ಸಹೋದರಿ, ಆಲೂರುವಿನ ಹೊಂಗನಹಳ್ಳಿಯಲ್ಲಿ ನೆಲೆಸಿರುವ ಜಯಂತಿ ಎಂಬವರ ಪುತ್ರ ದಿನೇಶ್ ಎಂಬಾತನೊಂದಿಗೆ ಕಳೆದ 10 ತಿಂಗಳ ಹಿಂದೆಯಷ್ಟೆ ವಿವಾಹ ಮಾಡಿಕೊಡಲಾಗಿತ್ತು. ಸಹೋದರನ ಪುತ್ರಿ, ಸಂಬಂಧದಲ್ಲೂ ಸೊಸೆ ಯಾಗಿದ್ದ ಶೋಭಾ ಳೊಂದಿಗೆ ಅತ್ತೆ ಜಯಂತಿ ಹಾಗೂ ಪತಿ ದಿನೇಶ್‍ನ ಸಹೋದರಿ ಜಲಜ ಎಂಬವರುಗಳು ಜಗಳ ಕಾಯುತ್ತಿದ್ದರೆನ್ನಲಾಗಿದೆ. ಯುಗಾದಿ ಹಬ್ಬದ ಹಿಂದಿನ ದಿನವಾದ ಶನಿವಾರ ರಾತ್ರಿ ಮನೆಯಲ್ಲಿ ಜಗಳ ಶುರುವಾಗಿದೆ. ಸಮಾಧಾನಪಡಿ ಸಲಾಗದೆ ಶೋಭಾಳ ಪತಿ ದಿನೇಶ್ ಶೋಭಾಳಿಗೆ ನಾಲ್ಕು ಪೆಟ್ಟು ಕೊಟ್ಟು ಮನೆಯಿಂದ ಹೊರ ಹೋಗಿದ್ದಾನೆ.ಸಾಯಿಸಿ ತೂಗಿದರು..!ದಿನೇಶ ಹೊರ ಹೋದ ಬಳಿಕ ಅತ್ತೆ ಹಾಗೂ ನಾದಿನಿ ಮತ್ತೆ ಶೋಭಾಳೊಂದಿಗೆ ಜಗಳವಿಟ್ಟುಕೊಂಡಿ ದ್ದಾರೆ. ಜಗಳದಲ್ಲಿ ಶೋಭಾಳ ತಲೆ ಭಾಗಕ್ಕೆ ಬಲವಾಗಿ ಹೊಡೆತ ಬಿದ್ದಿದೆ. ಹೊಡೆತ ತಾಳಲಾರದೆ ಶೋಭಾ ಅಲ್ಲೇ ಇಹಲೋಕ ತ್ಯಜಿಸಿದ್ದಾಳೆ. ಸತ್ಯ ಮರೆಮಾಚಲು ಇಬ್ಬರು ಸೇರಿ ಮೃತದೇಹಹವನ್ನು ಹಗ್ಗದಿಂದ ಮನೆಯ ಕೌಕೋಲುವಿಗೆ ನೇತು ಹಾಕಿ ಪೊಲೀಸರಿಗೆ ಸೊಸೆ ನೇಣು ಹಾಕಿಕೊಂಡಿರುವದಾಗಿ ಕರೆ ಮಾಡಿ ತಿಳಿಸಿದ್ದಾರೆ.

ನಂತರ ಯಾರಿಗೂ ಸಂಶಯ ಬರಬಾರದೆಂದು ಪೊಲೀಸರು ಬರುವ ಮುಂಚೆಯೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರಿಗೆ ಶೋಭಾಳ ದೇಹದ ಭಾಗಗಳಲ್ಲಿ ಹಾಗೂ ತುಟಿಗಳಲ್ಲಿ ಗಾಯವಾಗಿರುವದು, ಬಾಯಿಂದ ರಕ್ತ ಒಸರುತ್ತಿರುವದು ಕಂಡುಬಂದಿದೆ. ವೈದ್ಯರಿಂದ ಮಾಹಿತಿ ಪಡೆದು ಅತ್ತೆ ಜಯಂತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಜಯಂತಿ ತಾವೇ ಹಲ್ಲೆ ಮಾಡಿ ಹತ್ಯೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಪತಿ ದಿನೇಶ ಅತ್ತೆ ಜಯಂತಿ ಹಾಗೂ ನಾದಿನಿ ಜಲಜ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ದಿನೇಶ್ ಹಾಗೂ ಜಯಂತಿಯನ್ನು ಬಂಧಿಸಿದ್ದಾರೆ. ಜಲಜ ತಲೆ ಮರೆಸಿಕೊಂಡಿದ್ದಾಳೆ.

ಇತ್ತ ಯುಗಾದಿ ಹಬ್ಬಕ್ಕೆ ಮಗಳು ಬರುತ್ತಾಳೆಂಬ ಸಂಭ್ರಮದಲ್ಲಿದ್ದ ಧರ್ಮ ಅವರ ಕುಟುಂಬಕ್ಕೆ ಮಗಳ ಸಾವಿನ ಸುದ್ದಿ ಕೇಳಿ ಬರಸಿಡಿಲು ಎರಗಿದಂತಾಗಿದೆ. ಯುಗಾದಿ ಯಂದೇ ಮಗಳ ಮೃತದೇಹ ತಂದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ವರದಿ: ನಾಗರಾಜ ಶೆಟ್ಟಿ