ಗೋಣಿಕೊಪ್ಪಲು, ಮಾ.19 : ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಹುಲಿ ಧಾಳಿಯಿಂದ ರೈತರ ಜಾನುವಾರುಗಳು ನಾಶವಾಗುತ್ತಿರುವ ಬಗ್ಗೆ ಆಕ್ರೋಶ ಗೊಂಡ ರೈತರು ಪೊನ್ನಂಪೇಟೆ ಅರಣ್ಯ ಇಲಾಖಾ ಕಛೇರಿಯ ಮುಂದೆ ಪ್ರತಿಭಟನೆ ನಡೆಸುವ ಮೂಲಕ ನೊಂದ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ಆರಂಭಿಸಿದ ರೈತರು ಪೊನ್ನಂಪೇಟೆಯ ಬಸ್ ನಿಲ್ದಾಣದಿಂದ ಅರಣ್ಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿದರು. ನಂತರ ಅರಣ್ಯ ಕಛೇರಿಯ ಮುಂದೆ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.ನಂತರ ಅರಣ್ಯ ಕಛೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ತಿತಿಮತಿ ವಲಯ ಅರಣ್ಯಾಧಿಕಾರಿ ಶ್ರೀಪತಿ ಅವರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ ಇತ್ತಿಚೆಗೆ ದಕ್ಷಿಣ ಕೊಡಗಿನಲ್ಲಿ ನಿರಂತರ ಹುಲಿ ಹಾವಳಿಯಿಂದಾಗಿ ರೈತರ ಕೊಟ್ಟಿಗೆಯಲ್ಲಿರುವ ಬೆಲೆ ಬಾಳುವ ಹಸುಗಳು ಬಲಿಯಾಗುತ್ತಿವೆ ಇದರಿಂದ ರೈತರ ಬದುಕು ದುಸ್ಥರವಾಗಿದೆ. ಇಲಾಖೆ ಕೇವಲ 10 ಸಾವಿರ ಹಣವನ್ನು ಪರಿಹಾರವಾಗಿ ವಿತರಿಸುತ್ತಿದೆ. ಇದರಿಂದ ರೈತರ ಸಂಕಷ್ಟ ಪರಿಹಾರವಾಗುತ್ತಿಲ್ಲ. ಹಳೆಯ ಕಾಲದ ಸರ್ಕಾರಿ ಆದೇಶವನ್ನು ರದ್ದು ಪಡಿಸಿ ಹೆಚ್ಚಿನ ಪರಿಹಾರ ನೀಡುವಂತಾಗಬೇಕೆಂದು ಆಗ್ರಹಿಸಿದರು.

ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ ಜಿಲ್ಲೆಯ ವಿವಿಧೆಡೆ ಆನೆ ಧಾಳಿಯಿಂದ ಮಾನವನ ಜೀವ ಹಾಗೂ ಆಸ್ತಿ ಪಾಸ್ತಿಗಳು ನಷ್ಟವಾಗುತ್ತಿವೆ. ಈ ಬಗ್ಗೆ ಹಲವು ಹೋರಾಟಗಳನ್ನು ನಡೆಸಿದರೂ

(ಮೊದಲ ಪುಟದಿಂದ) ಆನೆ ಧಾಳಿಯನ್ನು ನಿಯಂತ್ರಿಸುವಲ್ಲಿ ಸತತವಾಗಿ ಅರಣ್ಯ ಇಲಾಖೆ ಹಾಗೂ ಸಿಬ್ಬಂದಿಗಳು ಎಡವುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯ ತೀವ್ರತೆ ಹರಿತ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ ಹಾಗೂ ನಾಗರಹೊಳೆ ವಲಯದ ಎಸಿಎಫ್ ಪೌಲ್ ಆ್ಯಂಟೋನಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಕಾರರ ಮನವಿ ಸ್ವೀಕರಿಸಿದರು. ಈ ಸಂದರ್ಭ ಮನವಿ ಸ್ವೀಕರಿಸಿ ಮಾತನಾಡಿದ ಹರೀಶ್ ಬೋಪಣ್ಣ ಹಾಗೂ ಪದ್ಮಿನಿ ಪೊನ್ನಪ್ಪ ಹುಲಿ ಹಾವಳಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸಿಗುತ್ತಿರುವ ಪರಿಹಾರದ ಬಗ್ಗೆ ಈಗಾಗಲೇ ಅರಣ್ಯ ಮಂತ್ರಿಯೊಂದಿಗೆ ಚರ್ಚಿಸಿದ್ದು ಮುಂದಿನ ಒಂದು ವಾರದಲ್ಲೇ ಸಭೆ ಕರೆದು ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಲಾಗುವದು ಎಂದರು.

ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ವಕೀಲರಾದ ಹೇಮಚಂದ್ರ, ಮಂಡೇಪಂಡ ಪ್ರವೀಣ್, ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುಜಯ್ ಬೋಪಯ್ಯ, ಮಚ್ಚಮಾಡ ರಂಜಿ, ಪುಚ್ಚಿಮಾಡ ಸಂತೋಷ್, ಸುಭಾಶ್,ಮಲ್ಚೀರ ಅಶೋಕ್, ಬೋಡಂಗಡ ಬೋಪಯ್ಯ, ಮಲ್ಚೀರ ಅನಿಲ್, ತೀತರಮಾಡ ಸುನೀಲ್, ಅಯ್ಯಮಾಡ ಹ್ಯಾರಿ ಸೊಮೇಶ್, ಮೂಕಳೇರ ಲಕ್ಷ್ಮಣ್, ಮುಂತಾದವರು ಹಾಜರಿದ್ದರು. ರೈತರು ಹಸುವಿನೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ವೃತ್ತ ನೀರಿಕ್ಷಕ ಹರೀಶ್ಚಂದ್ರ, ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಶ್ರೀಮಂಗಲ ಠಾಣಾಧಿಕಾರಿ ಸಣ್ಣಯ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.