ಮಡಿಕೇರಿ, ಮಾ.18 : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯೊಂದಿಗೆ ಜನರ, ರೈತರ ಮತ್ತು ಕೃಷಿಕರ ಎಲ್ಲಾ ಆಶೋತ್ತರಗಳನ್ನು ಈಡೇರಿಸುವ ಕನಸು ಹೊತ್ತಿರುವ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‍ನಲ್ಲಿರುವ ಪ್ರತಿಯೊಂದು ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬೊಟ್ಟೋಳಂಡ ಜಿ.ಮಿಟ್ಟು ಚಂಗಪ್ಪ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿಗಳು ರೈತರ, ಕೃಷಿಕರ ಸಾಲ ಮನ್ನಾ, ಕಡಿಮೆ ಬಡ್ಡಿಯಲ್ಲಿ ಸಾಲ, ಸರಕಾರಿ ಉದ್ಯೋಗಸ್ಥರ ವೇತನ ಹೆಚ್ಚಳ ಹೀಗೆ ಪ್ರತಿಯೊಬ್ಬರಿಗೂ ಪ್ರಯೋಜನವಾಗುವ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಇದನ್ನು ಹಳ್ಳಿಯ ಜನತೆಗೆ ಮನದಟ್ಟು ಮಾಡಿ ಎಂದಿದ್ದಾರೆ.

ಕೊಡಗು ಜಿಲ್ಲೆಗೆ ಈ ಸಾಲಿನ ಬಜೆಟ್‍ನಲ್ಲಿ ತಲಕಾವೇರಿ- ಮಡಿಕೇರಿ ರಸ್ತೆ ಸೇರಿದಂತೆ ಆ ವ್ಯಾಪ್ತಿಯ ಅನೇಕ ರಸ್ತೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂ. ಅನುದಾನ ನೀಡಿದ್ದಾರೆ.

ಇದಕ್ಕೂ ಮುನ್ನ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಟ್ಟು 200 ಕೋಟಿ ಅನುದಾನವನ್ನು ಅದರಲ್ಲೂ ಕೊಡಗಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜಿನಲ್ಲಿ ನೀಡಿದ್ದಾರೆ. ಈಗಾಗಲೇ ಕೊಡಗಿಗೆ ಅನೇಕ ಯೋಜನೆಗಳನ್ನು ನೀಡಿದ್ದು, ಮೆಡಿಕಲ್ ಕಾಲೇಜು, ಜಿಲ್ಲಾ ಪಂಚಾಯಿತಿ ಭವನ, ನ್ಯಾಯಾಲಯ ಕಟ್ಟಡ, ಕೊಡವ ಹೆರಿಟೇಜ್, ಮಡಿಕೇರಿ ಮಿನಿ ವಿಧಾನ ಸೌಧ, ಮಡಿಕೇರಿಯಲ್ಲಿ ಖಾಸಗಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಹೈಟೆಕ್ ಮಾರುಕಟ್ಟೆ ಇವುಗಳು ಕಾಂಗ್ರೆಸ್ ಸರಕಾರ ನೀಡಿದ ಕೊಡುಗೆಗಳಾಗಿವೆ ಎಂದು ವಿವರಿಸಿದ್ದಾರೆ.

ರೈತರಿಗೆ ಸಾಲದ ಹೊರೆಯನ್ನು ಕೂಡಲೇ ಕಡಿಮೆಗೊಳಿಸಲು ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರವು 8165 ಕೋಟಿ ರೂ. ಗಳ ವೆಚ್ಚದಲ್ಲಿ ಸಾಲ ಮನ್ನಾ ಯೋಜನೆಯನ್ನು ಘೋಷಿಸಿದ್ದ ಕೊಡಗು ಜಿಲ್ಲೆಯಲ್ಲೂ ಈ ಸಾಲ ಮನ್ನಾದಿಂದ ನೂರಾರು ರೈತರ ಸಾಲ ಮನ್ನಾ ಆಗಿ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮೊತ್ತದ ಒಂದು ಭಾಗವನ್ನು ಈಗಾಗಲೇ ಪ್ರಸಕ್ತ ಆರ್ಥಿಕ ವರ್ಷದ ಪೂರಕ ಅಂದಾಜಿನಲ್ಲಿ ಒದಗಿಸಲಾಗಿದೆ. ಉಳಿದ ಮೊತ್ತವನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಒದಗಿಸಲು ಈ ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.

ಅನೇಕ ರೀತಿಯಲ್ಲಿ ರೈತರಿಗೆ, ಕೃಷಿಕರಿಗೆ ಮತ್ತು ಬೆಳೆಗಾರರಿಗೆ ಸಾಕಷ್ಟು ಅನೂಕೂಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲ್ಪಿಸಿದ್ದಾರೆ. ಈ ಬಜೆಟ್‍ನಿಂದ ರಾಜ್ಯ ಸೇರಿದಂತೆ ಕೊಡಗಿನ ರೈತರಿಗೆ, ಕೃಷಿಕರಿಗೆ ಮತ್ತು ಬೆಳೆಗಾರರಿಗೆ ಸಾಕಷ್ಟು ಅನೂಕೂಲವಾಗಲಿದೆ, ಇದುವರೆಗಿಂತ ಮುಂದಿನ ವರ್ಷಗಳಲ್ಲಿ ಇವರೆಲ್ಲರಿಗೂ ಇನ್ನಷ್ಟು ಅನುಕೂಲವಾಗಲಿದೆ ಎಂದು ಮಿಟ್ಟುಚಂಗಪ್ಪ ತಿಳಿಸಿದ್ದಾರೆ.