ಸೋಮವಾರಪೇಟೆ,ಮಾ.19: ಸಮೀಪದ ತಣ್ಣೀರುಹಳ್ಳದ ಶ್ರೀ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಅಬ್ಬೂರುಕಟ್ಟೆ ಒಕ್ಕಲಿಗರ ಸಂಘ ಪ್ರಥಮ ಸ್ಥಾನ ಗಳಿಸಿತು.
ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅಬ್ಬೂರುಕಟ್ಟೆ ತಂಡ, ಮಂಗಳೂರು ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ವಿಜೇತ ತಂಡಕ್ಕೆ ರೂ. 30 ಸಾವಿರ ನಗದು ಬಹುಮಾನ ಸೇರಿದಂತೆ ಆಕರ್ಷಕ ಟ್ರೋಫಿ ವಿತರಿಸಲಾಯಿತು.
ದ್ವಿತೀಯ ಸ್ಥಾನ ಪಡೆದ ಮಂಗಳೂರು ತಂಡ ರೂ. 25 ಸಾವಿರ ನಗದು ಮತ್ತು ಟ್ರೋಫಿಗೆ ಭಾಜನವಾದರೆ, ತೃತೀಯ ಸ್ಥಾನ ಗಳಿಸಿದ ಕುಶಾಲನಗರದ ಮಿನಿಸ್ಟರ್ಸ್ ಕೋರ್ಟ್ ಮತ್ತು ಚತುರ್ಥ ಸ್ಥಾನ ಪಡೆದ ಭೈರವ ಟ್ರಾವೆಲ್ಸ್ ತಂಡಗಳಿಗೆ ತಲಾ 5 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಪಂದ್ಯಾಟದಲ್ಲಿ 18 ತಂಡಗಳು ಭಾಗವಹಿಸಿದ್ದವು. ಕೂತಿ ಗ್ರಾಮದ ರತನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕಿಶೋರ್‍ಕುಮಾರ್, ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಸಂಘದ ಮಾಜೀ ಅಧ್ಯಕ್ಷ ಸದಾನಂದ್, ಬಿ.ಆರ್. ಅವಿನಾಶ್, ಟಿ.ಎನ್. ದೀಪು, ಕೆ.ರವಿ ಸೇರಿದಂತೆ ಇತರರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಸಂಜೆ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜೀ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ.ವಿಜಯ, ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಮಲ್ಲೇಶ್‍ಗೌಡ, ಗಿರೀಶ್ ಮಲ್ಲಪ್ಪ, ಅರುಣ್ ಕಾಳಪ್ಪ, ಕೆದಂಬಾಡಿ ಮದುಶಂಕರ, ಜಿ.ಪಂ. ಸದಸ್ಯರಾದ ಪೂರ್ಣಿಮಾ ಗೋಪಾಲ್, ಬಿ.ಜೆ. ದೀಪಕ್, ತಾ.ಪಂ. ಮಾಜಿ ಅಧ್ಯಕ್ಷ ಅರೆಯೂರು ಜಯಣ್ಣ, ಎಸ್.ಎಂ. ಡಿಸಿಲ್ವಾ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.